ಕೊರಟಗೆರೆ :
ಪ್ರಜಾಶಕ್ತಿ ಟಿವಿ ಪ್ರಾರಂಭವಾಗಿ ಕೆಲವೇ ತಿಂಗಳುಗಳಲ್ಲಿ ತುಮಕೂರಿನ ಮನೆ ಮನೆಗೂ ತಲುಪಿದೆ. ಗ್ರಾಮಗಳ ಸಮಸ್ಯೆಗಳ ಬಗ್ಗೆ ವರದಿ ಬಿತ್ತರಿಸುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಕೆಲಸವನ್ನು ಕೂಡ ಮಾಡಿದ್ದು, ಜನರಿಂದ ವ್ಯಾಪಕ ಮೆಚ್ಚುಗೆಗೂ ಕೂಡ ಪಾತ್ರವಾಗಿತ್ತು. ಈ ಬೆನ್ನಲ್ಲೇ ಕೊರಟಗೆರೆ ತಾಲೂಕಿನ ತಪೋಕ್ಷೇತ್ರವಾಗಿರೋ ಸಿದ್ದರಬೆಟ್ಟದ ಸಮಸ್ಯೆಗಳ ಬಗ್ಗೆ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡಿದ್ದು, ವರದಿಗೆ ಇಂದು ಫಲಶೃತಿ ಸಿಕ್ಕಂತಾಗಿದೆ, ಹೌದು ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ದಾಸೋಹದ ಉಗ್ರಾಣದಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಿರೋ ಅಕ್ಕಿ, ಬೆಲ್ಲ, ಹುಣುಸೆ ಹಣ್ಣು, ರಾಗಿ ಸೇರಿ ದವಸ ಧಾನ್ಯಗಳನ್ನು ಕೊರಟಗೆರೆ ಗ್ರೇಡ್-2 ತಹಶೀಲ್ದಾರ್ ರಾಮ್ ಪ್ರಸಾದ್ ನೇತೃತ್ವದಲ್ಲಿ ಸಾರ್ವಜನಿಕರ ಮುಂದೆ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ದಾಸೋಹದಲ್ಲಿದ್ದ ಹೆಚ್ಚುವರಿ ದವಸ ಧಾನ್ಯಗಳು ಬಳಕೆ ಮಾಡಲಾಗದೇ ಹುಳು ಬೀಳ್ತಾ ಇತ್ತು. ಹೀಗಾಗಿ ಹರಾಜು ಪ್ರಕ್ರಿಯೆಗೆ ಒತ್ತಡ ಕೇಳಿಬಂದಿದ್ದರೂ ಕೂಡ ಹರಾಜು ನಡೆದಿರಲಿಲ್ಲ, ಇದೀಗ ಸಾರ್ವಜನಿಕರ ಇಚ್ಛೆಯಂತೆ ಷರತ್ತು ಬದ್ದವಾಗಿ ದಾಸೋಹ ಭವನದ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಮಾಡಲಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 30 ಮಂದಿ ಠೇವಣಿದಾರರು ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹೊರಗಡೆಯಿಂದ ಬಂದು ಹರಾಜಿನಲ್ಲಿ ಪಾಲ್ಗೊಂಡ ಠೇವಣಿದಾರರಿಗೆ ಸ್ಥಳೀಯರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
ಇನ್ನು ಮಾರ್ಚ್ 26 ರಂದು ಹಲವು ಗೊಂದಲಗಳಿಂದ ಮತ್ತು ಕಾನೂನು ಕ್ರಮ ಕೈಗೊಳ್ಳದೇ ಬಹಿರಂಗವಾಗಿ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದ ಮುಜಾರಾಯಿ ಇಲಾಖೆಯ FDA ಸೌಭಾಗ್ಯ ನಡೆಯನ್ನು ಸಾರ್ವಜನಿಕರು ಖಂಡಿಸಿದ್ದರು. ಗ್ರೇಡ್ -2 ತಹಶೀಲ್ದಾರ್ ರಾಮ್ ಪ್ರಸಾದ್ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸಿ ಹರಾಜು ದಿನಾಂಕವನ್ನು ನಿಗದಿ ಪಡಿಸಿದ್ದರು. ಅದರಂತೆ ಇಂದು ಬಹಿರಂಗ ಹರಾಜು ಪ್ರಕ್ರಿಯೆ ಯಶಸ್ವಿಯಾಗಿದೆ. ಈ ವೇಳೆ ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳಲು ತುಮಕೂರು, ಮಧುಗಿರಿ ಮತ್ತು ಇತರೆ ಭಾಗಗಳಿಂದ ಬಂದಿದ್ದ ಠೇವಣಿದಾರರನ್ನು ಸ್ಥಳೀಯರು ಸಭೆಯಲ್ಲಿ ಘೇರಾವು ಹಾಕಿದರು. ಜೊತೆಗೆ ಬೀಟ್‌ನಲ್ಲಿ ಸ್ಥಳೀಯರನ್ನು ಬಿಟ್ಟು ಹೊರಗಡೆಯಿಂದ ಯಾರು ಭಾಗವಹಿಸಬಾರದೆಂದು ಸ್ಥಳೀಯರು ಆಕ್ರೋಶ ಹೊರಹಾಕಿದರು. ಈ ವೇಳೆ ಬೀಟ್‌ದಾರರು ಹಾಗೂ ಸ್ಥಳೀಯರ ನಡುವೆ ಗಲಾಟೆ ಕೂಡ ನಡೆಯಿತು.
ಬಹಿರಂಗ ಹರಾಜಿನಲ್ಲಿ ಅಕ್ಕಿ, ರಾಗಿ, ಹುಣುಸೆ, ಬೆಲ್ಲ ಮತ್ತು ತೆಂಗಿನಕಾಯಿಯನ್ನು ಮಾತ್ರ ಹರಾಜು ಮಾಡಲಾಗಿದೆಯಂತೆ. ಐದು ಮಂದಿ ಬೀಟ್‌ದಾರರು ಬಹಿರಂಗ ಹರಾಜಿನಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಹರಾಜಿನಲ್ಲಿ ಸ್ಥಳೀಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಗ್ರೇಡ್-2 ತಹಶೀಲ್ದಾರ್ ರಾಮ್ ಪ್ರಸಾದ್ ತಿಳಿಸಿದರು.
ಒಟ್ಟಿನಲ್ಲಿ ಸಿದ್ದರಬೆಟ್ಟ ದಾಸೋಹದಲ್ಲಿದ್ದ ಹೆಚ್ಚುವರಿ ದಿನಸಿ ಕೊನೆಗೂ ಹರಾಜು ಆಗಿದ್ದು, ಹುಳು ಬಿದ್ದು ಹಾಳಾಗ್ತಾ ಇದ್ದ ದವಸ ಧಾನ್ಯ ಹಾಳಾಗುವುದು ತಪ್ಪಿದೆ.