ಕೊರಟಗೆರೆ:
ರಾಗಿ ಬೆಳೆ ರೈತರ ಕೈ ಸೇರಿದ್ದು, ರಾಗಿ ಮಾರಾಟಕ್ಕಾಗಿ ರಾಗಿ ಬೆಳೆಗಾರರು ಕಾಯ್ತಾ ಇದ್ದರು. ಕೊರಟಗೆರೆಯಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪನೆ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಗ್ರಾಮೀಣ ರೈತರ ಬಹುದಿನದ ಬೇಡಿಕೆಗೆ ಸ್ಪಂದಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕೆಡಿಪಿ ಸಭೆಯಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್‌ಗೆ ತುಮಕೂರು ಸೇರಿ ಹಲವು ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪನೆ ಮಾಡಲು ಪರಮೇಶ್ವರ್ ಸೂಚನೆ ನೀಡಿದ್ದರು. ಇದೀಗ ಸಚಿವ ಪರಮೇಶ್ವರ್ ಆದೇಶದಂತೆ ಕೊರಟಗೆರೆ ತಾಲೂಕಿನಲ್ಲಿ ಅಕ್ಕಿರಾಂಪುರ APMC ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭ ಮಾಡಲಾಗಿದ್ದು, ರೈತರಲ್ಲಿ ಸಂತಸ ಮೂಡಿದೆ.
ಕೊರಟಗೆರೆ ತಾಲೂಕಿನ ಕೋಳಾಲ, ಹೊಳವನಹಳ್ಳಿ, ಚನ್ನರಾಯನದುರ್ಗ ಮತ್ತು ಕಸಬಾದ ಸಾವಿರಾರು ರೈತರು ತಾವು ಬೆಳೆದ ರಾಗಿ ಮಾರಾಟಕ್ಕೆ ತುಮಕೂರು ಮತ್ತು ಮಧುಗಿರಿಗೆ ಹೋಗಿ ದಿನಗಟ್ಟಲೆ ಕಾಯ್ದು, ರಾಗಿ ಮಾರಾಟ ಮಾಡುವ ದುಸ್ಥಿತಿ ಇತ್ತು. ಇದೀಗ ಕೊರಟಗೆರೆಯಲ್ಲೇ ರಾಗಿ ಖರೀದಿ ಕೇಂದ್ರ ಪ್ರಾರಂಭ ಆಗಿದ್ದಕ್ಕೆ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಕೊರಟಗೆರೆಯಲ್ಲಿಯೇ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿರೋದರಿಂದ 30 ಕಿಲೋ ಮೀಟರ್ ದೂರ ಹೋಗುವುದು ತಪ್ಪಿಸಿದೆ ಹಾಗೂ ಕಾಯುವ ಪರಿಸ್ಥಿತಿ ಇಲ್ಲವಾಗಿದೆ. ರೈತರು ಬಂದ ಕೂಡಲೇ ರಾಗಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇದರಿಂದ ನಮಗೆ ಸಾಕಷ್ಟು ಅನುಕೂಲ ಆಗ್ತಿದೆ ಎಂದು ರೈತರು ಸಂತೋಷಗೊಂಡಿದ್ದಾರೆ.