ಕೊರಟಗೆರೆ:
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಇಂದು ಎಲ್ಲಿನೋಡಿದರೂ ಕೆಂಪು-ಹಳದಿ ಬಾವುಟಗಳೇ ರಾರಾಜಿಸುತ್ತಿವೆ. ಕನ್ನಡ ಧ್ವಜಸ್ತಂಭ ತೆರವು ಮಾಡಿದ್ದನ್ನು ಖಂಡಿಸಿ ಕೊರಟಗೆರೆ ತಾಲೂಕು ಆಡಳಿತದ ವಿರುದ್ಧ ಕರವೇ ಕಾರ್ಯಕರ್ತರ ಕಿಚ್ಚು ಜೋರಾಗಿದ್ದು, ಇಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಪ್ರತಿಭಟನೆಯ ಸಲುವಾಗಿ ತುಮಕೂರು ಜಿಲ್ಲೆಯ ಎಲ್ಲಾ ಹತ್ತು ತಾಲೂಕಿನಿಂದ ಕರವೇ ಕಾರ್ಯಕರ್ತರು ಕೊರಟಗೆರೆಗೆ ಆಗಮಿಸಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ಜಮಾಯಿಸಿರುವ ಕರವೇ ಕಾರ್ಯಕರ್ತರು ಕನ್ನಡ ಬಾವುಟವನ್ನು ಹಿಡಿದು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ಪಟ್ಟಣ ಪಂಚಾಯ್ತಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಮುಂಭಾಗ 4 ವರ್ಷದ ಹಿಂದೆ ಕನ್ನಡ ಧ್ವಜಸ್ತಂಭವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. 56 ಅಡಿ ಎತ್ತರದ ಕನ್ನಡದ ಧ್ವಜಸ್ತಂಭ ಇದಾಗಿತ್ತು. ಆದರೆ ರಾತ್ರೋರಾತ್ರಿ ಈ ಧ್ವಜಸ್ತಂಭವನ್ನು ತೆರವು ಮಾಡಿದ್ದಾರೆ ಎಂದು ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಇಂದು ತುಮಕೂರು ಜಿಲ್ಲೆಯ ಸಾವಿರಾರು ಕರವೇ ಕಾರ್ಯಕರ್ತರು ಮತ್ತು ರೈತಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಿವೆ. ಪ್ರತಿಭಟನಾ ಸ್ಥಳದಲ್ಲಿ 200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ಪೊಲೀಸ್ ಇಲಾಖೆಯಿಂದ ಬಿಗಿಭದ್ರತೆ ಕೈಗೊಳ್ಳಲಾಗಿದೆ.