ಕೊರಟಗೆರೆ:
ಕೊರಟಗೆರೆ ತಾಲೂಕು ಜೆಟಿ ಅಗ್ರಹಾರ ಗ್ರಾಮ ಪಂಚಾಯ್ತಿಯಲ್ಲಿ ಮಕ್ಕಳ ಗ್ರಾಮ ಸಭೆ ಹಾಗೂ ವಿಶ್ವ ವಿಶೇಷ ಚೇತನರ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ 15 ಗ್ರಾಮಗಳ 35 ಮಂದಿ ವಿಶೇಷ ಚೇತನರಿಗೆ ಫ್ಯಾನ್, ಕುಕ್ಕರ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯ್ತಿ ಪಿಡಿಓ ರಂಗನರಸಯ್ಯ, ಗ್ರಾಮ ಪಂಚಾಯ್ತಿಗಳು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸ್ಥಾಪಿತವಾದ ಸ್ವತಂತ್ರ ಕಚೇರಿಗಳಾಗಿವೆ. ಇಲ್ಲಿಗೆ ಮಕ್ಕಳು ಸಹ ಬಂದು ಸೌಲಭ್ಯ ಪಡೆಯಬಹುದು ಎಂದರು. ವಿದ್ಯಾರ್ಥಿಗಳು ನೀವು ಓದುವ ಶಾಲೆ ಅಥವಾ ವಾಸಿಸುವ ಸ್ಥಳದಲ್ಲಿ ಅಗತ್ಯ ಮೂಲಭೂತ ಸೌಲಭ್ಯಕ್ಕಾಗಿ ಗ್ರಾಮ ಪಂಚಾಯ್ತಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪ ರವಿಕುಮಾರ್ ಮಾತನಾಡಿ, ಸರ್ಕಾರದ ಮಹತ್ತರ ಯೋಜನೆಗಳು ಗ್ರಾಮೀಣ ಭಾಗಕ್ಕೂ ಸಂಪೂರ್ಣವಾಗಿ ಅನುಷ್ಠಾನವಾಗಲೆಂದು ಗ್ರಾಮ ಪಂಚಾಯಿತಿಗಳು ಕೆಲಸ ಮಾಡುತ್ತಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರ ಸ್ಪೂರ್ತಿ ಪಡೆದು ರಾಜಕೀಯ ಕ್ಷೇತ್ರದಲ್ಲಿ ಜನರ ಸೇವೆ ಮಾಡುವ ಉದ್ದೇಶವಿಟ್ಟುಕೊಂಡು ಬರಬೇಕು ಎಂದರು.