ಪೊಲೀಸ್ ಸಿಬ್ಬಂದಿ ಮತ್ತು ದಂಪತಿಗಳುತುಮಕೂರು
ಕೊರಟಗೆರೆ:
ಮೈಕ್ರೋ ಫೈನಾನ್ಸ್ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗ್ತಿದ್ದು, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಕಲ್ಪತರು ನಾಡು ತುಮಕೂರಿನಲ್ಲಿಯೂ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗ್ತಿದ್ದು, ಗೃಹ ಸಚಿವರ ಸ್ವಕ್ಷೇತ್ರ ಕೊರಟಗೆರೆಯಲ್ಲೂ ಕೂಡ ಮೈಕ್ರೋ ಫೈನಾನ್ಸ್ ಕಾಟ ಮಿತಿ ಮೀರ್ತಿದೆ.
ಹೌದು.. ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ ಫೈನಾನ್ಸ್ಗಳ ಕಾಟ ತಾಳಲಾರದೆ ಇಬ್ಬರು ವಿಶೇಷಚೇತನ ಮಕ್ಕಳೊಂದಿಗೆ ದಂಪತಿ ಊರನ್ನೇ ತೊರೆದಿದ್ದರು. ಮಾರುತಿ ಮತ್ತು ವಿನುತಾ ದಂಪತಿ ಊರನ್ನೇ ಬಿಟ್ಟು ಹೋಗಿದ್ರು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ವರದಿಯನ್ನು ಬಿತ್ತರಿಸಿತ್ತು. ಪ್ರಜಾಶಕ್ತಿ ವರದಿ ಬಿಗ್ ಇಂಪ್ಯಾಕ್ಟ್ ಆಗಿದ್ದು, ಇದೀಗ ಈ ಬಡ ದಂಪತಿಗೆ ಕಿರುಕುಳ ನೀಡಿ ಊರು ಬಿಡುವಂತೆ ಮಾಡಿದ್ದ ಫೈನಾನ್ಸ್ ಕಂಪನಿ ವ್ಯವಸ್ಥಾಪಕ ನಟರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಫೈನಾನ್ಸ್ ಕಂಪನಿ ಮ್ಯಾನೇಜರ್ ನಟರಾಜ್ ಅವರನ್ನು ಪೊಲೀಸರು ಜೈಲಿಗಟ್ಟಿದ್ದು, ಬಡ ದಂಪತಿ ಮತ್ತೆ ಮನೆ ಸೇರಿದ್ದಾರೆ.
ವಿನುತಾ, ಮಾರುತಿ ದಂಪತಿ ಮಕ್ಕಳ ಚಿಕಿತ್ಸೆಗೆಂದು ಫೈವ್ ಸ್ಟಾರ್ ಎಂಬ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಎರಡೂವರೆ ಲಕ್ಷ ಸಾಲ ಮಾಡಿದ್ದರು. ಕಳೆದ ನಾಲ್ಕು ವರ್ಷದ ಹಿಂದೆ ಸಾಲ ಪಡೆದಿದ್ದ ಕುಟುಂಬ ಅದಕ್ಕೆ ಬಡ್ಡಿ ಸೇರಿಸಿ 4 ಲಕ್ಷ ೭೦ ಸಾವಿರ ರೂಪಾಯಿ ಕಟ್ಟಿದ್ದರು. ಇಷ್ಟು ಹಣ ಕಟ್ಟಿದ್ರು ಕೂಡ ಇನ್ನು ಕಟ್ಟಬೇಕು ಎಂದು ಫೈನಾನ್ಸ್ ಸಿಬ್ಬಂದಿ ಕಾಟ ಕೊಡ್ತಾ ಇದ್ದು, ಮನೆಯನ್ನೇ ಸೀಜ್ ಮಾಡಿ, ಮನೆಯ ಮೇಲೆ ಈ ಸ್ವತ್ತು ಫೈವ್ ಸ್ಟಾರ್ ಕಂಪನಿಗೆ ಅಡಮಾನವಾಗಿದೆ ಎಂದು ಬರೆದಿದ್ದರು. ಇನ್ನುಳಿದ 1 ಲಕ್ಷ ಚಕ್ರಬಡ್ಡಿಯ ಹಣ ಕಟ್ಟುವಂತೆ ಕಿರುಕುಳ ನೀಡಿದ ಪರಿಣಾಮ ಹಣ ಕಟ್ಟಲಾಗದೇ ಈ ದಂಪತಿ ಊರನ್ನೇ ಬಿಟ್ಟು ಬೆಂಗಳೂರಿಗೆ ಹೋಗಿ ವಾಸಿಸುತ್ತಿದ್ದರು.
ಇನ್ನು ಫೈವ್ ಸ್ಟಾರ್ ಫೈನಾನ್ಸ್ ಕಂಪನಿ ವಿರುದ್ದ ಪ್ರಜಾಶಕ್ತಿ ಸುದ್ದಿ ಬಿತ್ತರವಾದ ನಂತರ ತುಮಕೂರು ಡಿಸಿ ಮತ್ತು ಎಸ್ಪಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಆದೇಶದಂತೆ ಕಂದಾಯ ಇಲಾಖೆ ತಹಶೀಲ್ದಾರ್ ಮಂಜುನಾಥ ಮತ್ತು ಪೊಲೀಸ್ ಇಲಾಖೆಯ ಪಿಎಸೈ ಚೇತನ್ ನೇತೃತ್ವದಲ್ಲಿ ಮನೆಗೆ ಸುಣ್ಣಬಣ್ಣ ಹೊಡೆಸಿ ಮನೆಬಿಟ್ಟಿದ್ದ ಕುಟುಂಬವನ್ನು ಮತ್ತೆ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲೀಸರು ಮತ್ತು ಮಾಧ್ಯಮದವರಿಂದ ನಮಗೆ ನ್ಯಾಯ ಸಿಕ್ಕಿದೆ ಅಂತಾ ದಂಪತಿ ಸಂತಸಪಟ್ಟಿದ್ದಾರೆ.