ಕೋಲಾರ : ಕೋಲಾರ ಜಿಲ್ಲೆಯ ಗಾಂಧಿನಗರದ ಬಳಿ ಕೆಎಸ್ಆರ್ಟಿಸಿ ಬಸ್ ಗೆ ಓಮ್ನಿ ಕಾರು ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಗ್ರಾಮದ ನಿವಾಸಿ ಚೇತನ್ (21) ಎಂಬಾತ ಮೃತ ದುರ್ದೈವಿಯಾಗಿದ್ದಾನೆ.
ಮೃತ ಯುವಕ ಚೇತನ್ ವೃತ್ತಿಯಲ್ಲಿ ಪೋಟೋಗ್ರಾಫರ್ ಆಗಿದ್ದು, ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೋಲಾರದ ಗಾಂಧಿನಗರದ ಬಳಿ ಓಮ್ನಿ ಕಾರು ವೇಗವಾಗಿ ಬಂದು ಎದುರುಗಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಓಮ್ನಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿದು ಕೋಲಾರ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.