ಬಾಗಲಕೋಟೆ : ಪತಿ ನಾಪತ್ತೆ ಪತ್ನಿಯನ್ನು ಗೃಹಬಂಧನಲ್ಲಿಟ್ಟ ಪೋಷಕರು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ಮನುಷ್ಯತ್ವವನ್ನೇ ಪ್ರಶ್ನಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿದ್ದನ್ನೂ ಕೆಲವೇ ತಿಂಗಳಲ್ಲಿ ಗಂಡ ನಾಪತ್ತೆಯಾಗಿದ್ದರಿಂದ ಮಾನಸಿಕ ಸ್ಥಿರತೆ ಕಳೆದುಕೊಂಡ ಪತ್ನಿಯನ್ನು ಕುಟುಂಬಸ್ಥರು ದನದ ಕೊಟ್ಟಿಗೆಯಲ್ಲಿ ಕೈ ಕಾಲುಗಳನ್ನು ಕಟ್ಟಿಹಾಕಿ ಗೃಹಬಂಧನದಲ್ಲಿಟ್ಟಿದ್ದಾರೆ.

ಶಂಕ್ರವ್ವ ಸೇಬಿನಕಟ್ಟಿ ಎಂಬಾಕೆ, 2018ರ ಫೆಬ್ರವರಿಯಲ್ಲಿ ಪಿಡ್ಡಪ್ಪ ಎಂಬಾತನೊಂದಿಗೆ ವಿವಾಹವಾಗಿದ್ದರು. ಮದುವೆ ಬಳಿಕ ಪಿಡ್ಡಪ್ಪ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದು, ಬಳಿಕ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದಾರೆ. ಬದುಕಿದ್ದಾರೋ ಮರಣ ಹೊಂದಿದ್ದಾರೋ ಎಂಬುದು ಈವರೆಗೂ ಕುಟುಂಬದವರಿಗೆ ತಿಳಿದಿಲ್ಲ.

ಗಂಡ ನಾಪತ್ತೆಯಾದ ಪರಿಣಾಮವಾಗಿ ಶಂಕ್ರವ್ವ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾಳೆ. ನಿರೀಕ್ಷಿತ ಚಿಕಿತ್ಸೆ ದೊರಕದೇ, ಆಕೆಯ ನಡೆಗಟ್ಟಲು ಸಾಧ್ಯವಾಗದೆ, ತಂದೆ ತಾಯಿ ಶಂಕ್ರವ್ವನನ್ನು ದನದ ಕೊಟ್ಟಿಗೆಯಲ್ಲಿ ಬಂಧನದಲ್ಲಿಟ್ಟಿದ್ದಾರೆ. ದೈನಂದಿನ ಕೂಲಿ ಕೆಲಸಕ್ಕೆ ಹೋಗುವ ಮುನ್ನ ಆಕೆಗೆ ಊಟೋಪಹಾರ ನೀಡಿ, ಕೈಕಾಲುಗಳನ್ನು ಕಟ್ಟಿರುವ ಪರಿಸ್ಥಿತಿ ಮನಕಲಕುವಂತಿದೆ.

ಬಂಧನದಿಂದ ಬಿಡುಗಡೆ ಮಾಡಿದರೆ ತಾಯಿ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾಳೆ, ಬಾವಿಗೆ ಹಾರಿ ಆತ್ಮಹತ್ಯೆಗೂ ಮುಂದಾಗಿದ್ದಾಳೆ ಎನ್ನುವುದೇ ಪೋಷಕರ ಹೇಳಿಕೆ. ಈ ಕಾರಣದಿಂದ ಅವರು ಬೇರೊಂದು ದಾರಿ ಕಂಡುಕೊಳ್ಳಲಾಗದೆ ಈ ದುಃಖದ ನಿರ್ಧಾರಕ್ಕೆ ಬಂದಿದ್ದಾರೆ.

ಆರ್ಥಿಕ ಸಂಕಷ್ಟದ ಕಾರಣದಿಂದ ಶಂಕ್ರವ್ವಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗದ ಸ್ಥಿತಿಯಲ್ಲಿದ್ದು, ಈಕೆ ಮಾನವೀಯ ಸಹಾಯಕ್ಕೆ ತೀವ್ರವಾಗಿ ಬೇಕಾಗಿದೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇದೀಗ ಶಂಕ್ರವ್ವ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

 

 

 

 

Author:

...
Keerthana J

Copy Editor

prajashakthi tv

share
No Reviews