ಕ್ರಿಕೆಟ್ :
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಗ್ರೇಟ್ ಬ್ಯಾಟ್ಸ್‌ಮನ್. ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನೇ ಆಳಿದ ಕಿಂಗ್.. ದಾಖಲೆಗಳ ಸರದಾರ. ಚೇಸಿಂಗ್ ಮಾಸ್ಟರ್, ರನ್ ಮಷಿನ್..ಈ ದಿಗ್ಗಜ ಆಟಗಾರನಿಗಿರೋ ಬಿರುದುಗಳು ಒಂದಲ್ಲಾ..ಎರಡಲ್ಲಾ..ಕ್ರಿಕೆಟ್ ಮೂರೂ ಫಾರ್ಮ್ಯಾಟ್‌ಗಳಲ್ಲೂ ಮಿಂಚು ಹರಿಸಿದ್ದ ಕಿಂಗ್ ಕೊಹ್ಲಿ, ಈಗಾಗಲೇ ಟಿ-೨೦ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೂ ಗುಡ್ ಬೈ ಹೇಳಿದ್ದು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಹೌದು.. ಇತ್ತೀಚೆಗಷ್ಟೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ರು. ಇದ್ರ ಬೆನ್ನಲ್ಲೇ ಇದೀಗ ಮತ್ತೊಬ್ಬ ದಿಗ್ಗಜ ಕಿಂಗ್ ಕೊಹ್ಲಿ ಕೂಡ ವೈಟ್ ಜೆರ್ಸಿಗೆ ಗುಡ್ ಬೈ ಹೇಳಿದ್ದಾರೆ. ವಿರಾಟ್ ಕೊಹ್ಲಿ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ 14 ವರ್ಷಗಳ ಸುದೀರ್ಘ ಪಯಣದ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನಿವೃತ್ತಿಯ ಬಗ್ಗೆ ವಿರಾಟ್ ಕೊಹ್ಲಿ ಖುದ್ದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಮಾಹಿತಿ ಹಂಚಿಕೊಂಡಿದ್ದಾರೆ.
ರನ್ ಮಷಿನ್ ಅಂತಲೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿ, ಈವರೆಗೆ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 48.7ರ ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 31 ಅರ್ಧ ಶತಕಗಳು ಸೇರಿವೆ. 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಆ ಸರಣಿಯಲ್ಲಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿ ಮಿಂಚಿದ್ರು. ಆದ್ರೆ ನಂತರದ ಟೆಸ್ಟ್ ಪಂದ್ಯ ಗಳಿಂದ ಕೇವಲ 85 ರನ್ ಗಳಿಸಿದ್ದರು.
ಇನ್ನು 2025 ಐಪಿಎಲ್ ಮುಗಿದ ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡ ರೆಡಿಯಾಗುತ್ತಿದೆ. ಹೀಗಾಗಿ ಇಂಗ್ಲೆಂಡ್ ಸರಣಿಗೂ ಮುನ್ನ ಕೊಹ್ಲಿ ನಿವೃತ್ತಿ ಘೋಷಿಸದಂತೆ ಹಲವು ಕ್ರಿಕೆಟ್ ದಿಗ್ಗಜರು ಮನವಿ ಮಾಡಿದ್ದರು. ಆದ್ರೆ ಕೊಹ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗೀ ಇಂದು ನಿವೃತ್ತಿ ಘೋಷಿಸಿದ್ದಾರೆ. ರೋಹಿತ್ ಶರ್ಮಾ ಬಳಿಕ ಕಿಂಗ್ ಕೊಹ್ಲಿ ಕೂಡ ವಿದಾಯದ ಪಂದ್ಯವನ್ನಾಡದೇ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳುತ್ತಿರೋದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.