ಕೊರಟಗೆರೆ :
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೇಗಲಾಲ ಗ್ರಾಮದಲ್ಲಿ ಶ್ರೀ ಕಾವಲಮ್ಮ ಶಕ್ತಿ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಶಕ್ತಿದೇವತೆ ಕಾವಲಮ್ಮ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲಕ್ಕೆ ವಿದ್ಯುತ್ ದೀಪ ಅಲಂಕಾರ ಮಾಡಲಾಗಿದ್ದು, ದೇವಸ್ಥಾನಕ್ಕೆ ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಶಕ್ತಿದೇವತೆ ಜಲಧಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ 9 ವರ್ಷಗಳ ಬಳಿಕ ನಡೆದಿದ್ದು ಇತಿಹಾಸ ಸೃಷ್ಟಿಸಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಮರೇನಾಕನಹಳ್ಳಿ, ನೇಗಲಾಲ, ಸಿದ್ದರಬೆಟ್ಟ, ಮಾರಿಪಾಳ್ಯ, ಅನಪಲು, ಗಟ್ಟಿತಿಮ್ಮನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಸ್ಥರಲ್ಲದೇ, ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಭಕ್ತಿಯಲ್ಲಿ ಮಿಂದೆದ್ದರು.
ಇನ್ನು 13 ದಿನಗಳ ಕಾಲ ಈ ಜಾತ್ರಾ ಮಹೋತ್ಸವ ನಡೆಯಲಿದೆ. ದೇವರ ಉತ್ಸವ ಮೂರ್ತಿಯು ಆರತಿಗಳ ಸಮೇತವಾಗಿ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಎಡೆ ಪೂಜೆ ನೇರವೇರಿದ ಬಳಿಕ ಅಮ್ಮನವರಿಗೆ ಕಂಕಣ ಕಟ್ಟಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ವಾಡಿಕೆಯಂತೆ ಈ ಬಾರಿಯೂ ಅಮ್ಮನವರ ಉತ್ಸವ ಮೂರ್ತಿಯೊಂದಿಗೆ ಶ್ರೀ ಸಿದ್ದೇಶ್ವರ ಸ್ವಾಮಿ ತಪೋಭೂಮಿಯ ಬೆಟ್ಟವನ್ನು ಸುತ್ತಿದ್ದು ವಿಶೇಷವಾಗಿತ್ತು.
ಜಾತ್ರಾ ಮಹೋತ್ಸವಕ್ಕೆ ಭಕ್ತರ ದಂಡು ಆಗಮಿಸ್ತಾ ಇದ್ದು, ಭಕ್ತಾದಿಗಳಿಗಾಗಿ ಅನ್ನದಾಸೋಹವನ್ನು ಕೂಡ ಏರ್ಪಡಿಸಲಾಗಿತ್ತು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.