ಕರ್ನಾಟಕ:
ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಬೆಲೆ ಏರಿಕೆಯ ಶಾಕ್ ನೀಡಿದೆ. ಒಂದ್ಕಂಡೆ ಗ್ಯಾರಂಟಿ ಸ್ಕೀಂಗಳನ್ನು ಕೊಟ್ಟ ಕಾಂಗ್ರೆಸ್ ಸರ್ಕಾರ ಮತ್ತೊಂದು ಕೈಯಲ್ಲಿ ಹಾಗೆ ಕಿತ್ತುಕೊಳ್ಳುತ್ತಿದೆ. ಇಂದಿನಿಂದ ದುಬಾರಿ ದುನಿಯಾದ ಅಸಲಿ ಆಟ ಶುರುವಾಗಿದ್ದು, ಬಡ ಜನರ ಜೇಬಿಗೆ ಕತ್ತರಿ ಬೀಳೊದು ಗ್ಯಾರಂಟಿಯಾಗಿದೆ. ಸಾಲು ಸಾಲು ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಹಾಗೂ ಬಡವರ ಜೇಬು ಸುಡುತ್ತಿದೆ.
ಯುಗಾದಿ ಕಳೆಯುತ್ತಿದ್ದಂತೆ ಸಾಮಾನ್ಯ ಜನರಿಗೆ ಕೆಲವೊಂದು ಲಾಭ- ನಷ್ಟದ ಲೆಕ್ಕಾಚಾರ ನಿಯಮಗಳು ಜಾರಿಗೆ ಬರ್ತಾ ಇವೆ. ಏಪ್ರಿಲ್ 1 ರಿಂದ ಅಂದರೆ ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಇದರ ಜೊತೆಗೆ ಇಂದಿನಿಂದ ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕು ಸೇರಿ ಅನೇಕ ವಸ್ತುಗಳ ಹಾಗೂ ಸೇವೆಗಳ ಬೆಲೆಯನ್ನು ಸರ್ಕಾರ ಏರಿಕೆ ಮಾಡಿದ್ದು, ಜನರು ಕಂಗೆಟ್ಟಿದ್ದಾರೆ. ಹೌದು ಇಂದಿನಿಂದ ನಂದಿನಿ ಹಾಲಿನ ಹಾಗೂ ಮೊಸರಿನ ಪ್ಯಾಕೇಟ್ ಮೇಲೆ 4 ರೂಪಾಯಿ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಹಾಲಿನ ದರ ಏರಿಕೆ ಬಳಿಕ ಹೋಟೆಲ್‌ಗಳಲ್ಲಿ ಟೀ, ಕಾಫಿ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯಾವ್ಯಾವ ಬಗೆಯ ನಂದಿನಿ ಹಾಲಿದ ದರ ಏರಿಕೆ ಅಂತಾ ನೋಡೋದಾದರೆ,
ಹಾಲು/ ಮೊಸರಿನ ಮಾದರಿಗಳು ಹಳೆಯ ದರ (ಲೀ) ಪರಿಷ್ಕೃತ ದರ (ಲೀ)
ಟೋನ್ಡ್ ಹಾಲು ( ನೀಲಿ ಪಟ್ಟಣ) 42 ರೂ. 46 ರೂ.
ಹೋಮೇಜಿನೈಸ್ಡ್ ಟೋನ್ಡ್ ಹಾಲು 43 ರೂ. 47 ರೂ.
ಹಸಿರು ಪೊಟ್ಟಣದ ಹಾಲು 46 ರೂ. 50 ರೂ.
ನಂದಿನಿ ಸ್ಪೆಷಲ್ ಹಾಲು ( ಕೇಸರಿ ಬಣ್ಣ) 48 ರೂ. 52 ರೂ.
ಮೊಸರು ಪ್ರತಿ ಲೀಟರ್ 50 ರೂ. 54 ರೂ.
ಇನ್ನು ಇಂದಿನಿಂದ ವಿದ್ಯುತ್ ದರ ಕೂಡ ಏರಿಕೆಯಾಗಿದ್ದು, ಪ್ರತಿ ಯೂನಿಟ್‌ಗೆ 36 ಪೈಸೆ ವಿದ್ಯುತ್ ದರ ಏರಿಕೆಯಾಗಿದೆ. ಗೃಹಜ್ಯೋತಿ ಬಳಕೆದಾರರು 200 ಯೂನಿಟ್ ಮೇಲೆ ದಾಟಿದರೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇದರ ಜೊತೆಗೆ ಇಂದಿನಿಂದ ಉಕ್ಕು ವಾಹನಗಳ ಬಿಡಿಭಾಗಗಳ ಆಮದು ಶುಲ್ಕ, ಉಕ್ಕು ಆಮದು ದರ ಹೆಚ್ಚಾಗುತ್ತಿದೆ, ಇದರಿಂದ ಹೊಸ ವಾಹನ ಖರೀದಿಸುವವರಿಗೆ ಬೆಲೆ ಏರಿಕೆ ಶಾಕ್ ಎದುರಾಗಿದೆ. ಇದಿಷ್ಟಲ್ಲದೇ ಮುದ್ರಾಂಕ ಶುಲ್ಕ 50 ರೂಪಾಯಿಂದ 100 ರೂಪಾಯಿಗೆ ಏರಿಕೆ ಆಗಲಿದ್ದು, ಇದರಿಂದಾಗಿ ಅಫಿಡವಿಟ್ ಶುಲ್ಕ 20 ರೂಪಾಯಿಂದ 100 ರೂಪಾಯಿಗೆ ಏರಿಕೆ ಆಗಲಿದೆ.
ಇಂದಿನಿಂದ ಹೆದ್ದಾರಿಯಲ್ಲಿರೋ ಟೋಲ್‌ಗಳ ಸಂಗ್ರಹ ಕೂಡ ಏರಿಕೆಯಾಗಿದೆ. ಹೆದ್ದಾರಿ ಪ್ರಾಧಿಕಾರ ಕೂಡ ಟೋಲ್ ದರವನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಳ ಮಾಡಿದ್ದು, ರಾಜ್ಯದ ಒಟ್ಟು 66 ಟೋಲ್ ಪ್ಲಾಜ್‌ಗಳಲ್ಲಿ ಇಂದಿನಿಂದ ಟೋಲ್ ದರ ಏರಿಕೆಯಾಗಿದ್ದು ವಾಹನ ಸವಾರರಿಗೆ ಬಿಸಿ ತಟ್ಟುತ್ತಿದೆ.
ರಾಜ್ಯದ ಜನರಿಗೆ ಇಂದಿನಿಂದ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ಜನರು ಕಂಗೆಟ್ಟಿದ್ದಾರೆ. ಗ್ಯಾರಂಟಿ ಗ್ಯಾರಂಟಿ ಅಂತಾ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರವೇ ಬೆಲೆ ಏರಿಸಿದ್ದು, ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದ್ದು, ಮತ್ತಷ್ಟು ದುಬಾರಿಯಾಗಿದೆ ಜೀವನ. ಇನ್ನು ಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದು, ಏಪ್ರಿಲ್ 5 ರಂದು ರಾಜ್ಯದ್ಯಾಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.