ಕಲಬುರಗಿ:
ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ಜೆಸ್ಕಾಂ ಕಛೇರಿಗೆ ರೈತರು ಜೀವಂತ ಮೊಸಳೆ ತಂದು ವಿನೂತನ ಮತ್ತು ಆಘಾತಕಾರಿ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗರೂರ್ ಬಿ ಗ್ರಾಮದ ರೈತರು ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ಜೀವಂತ ಮೊಸಳೆ ತಂದು ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಎತ್ತಿನ ಗಾಡಿಗೆ ಬೃಹತ್ ಮೊಸಳೆಯನ್ನು ಕಟ್ಟಿಕೊಂಡು ಬಂದು ವಿದ್ಯುತ್ ಕಡಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಜೆಸ್ಕಾಂ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ತಮ್ಮ ಜಮೀನಿಗೆ ಮೊಸಳೆಗಳು ಆಗಮಿಸುತ್ತಿದ್ದು, ಇದರಿಂದ ತಮಗೆ ತೀವ್ರ ಸಮಸ್ಯೆಯಾಗುತ್ತಿದ್ದು. ಮೊಸಳೆಗಳಿಂದ ಜೀವಭಯದಲ್ಲೇ ಜಮೀನು ಕೆಲಸ ಮಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ದೂರು ಕೊಟ್ಟರು ಅವರಿಂದ ಯಾವುದೇ ಸೂಕ್ತ ರೀತಿಯ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ರೈತರು ಮೊಸಳೆಯನ್ನು ಸೆರೆಹಿಡಿದು ಎತ್ತಿನಗಾಡಿಯಲ್ಲಿ ಹೇರಿಕೊಂಡು ಬಂದು ಜೆಸ್ಕಾಂ ಕಚೇರಿಗೆ ತಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರೂರ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭೀಮಾ ನದಿ ಪಾತ್ರದ ಜಮೀನುಗಳಿಗೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಮಾತ್ರ ಜೆಸ್ಕಾಂ ತ್ರೀ ಫೇಸ್ ಕರೇಂಟ್ ಸಪ್ಲೈ ಮಾಡುತ್ತಿದೆ. ಇದರಿಂದ ರೈತರು ಅನಿವಾರ್ಯವಾಗಿ ಮಧ್ಯರಾತ್ರಿಯೇ ಎದ್ದು ಕೃಷಿ ಜಮೀನಿಗೆ ನೀರು ಹರಿಸಲು ಹೋಗುತ್ತಾರೆ. ಈ ವೇಳೆ ಅಲ್ಲಿ ಆಹಾರ ಅರಸುತ್ತ ಬರುವ ಮೊಸಳೆಗಳು ದಾಳಿ ಮಾಡುತ್ತಿವೆ ಎಂದು ರೈತರು ಆರೋಪಿಸುತ್ತಿದ್ದಾರೆ.