ಕಲಬುರಗಿ :
ಇತ್ತೀಚೆಗೆ ರಾಜ್ಯದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಯುವಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು, ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದಿದ್ದು, ರಾಜ್ಯದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೇ ಅಂತಹದೇ ಘಟನೆ ನಡೆದಿದೆ.
ಕಲಬುರಗಿ ನಗರದ ಸೇಂಟ್ ಮೇರಿ ಶಾಲೆಯಲ್ಲಿ ಇಂದು ನಡೆದ ನೀಟ್ ಪರೀಕ್ಷೆಯಲ್ಲಿ ಅಧಿಕಾರಿಗಳು ವಿದ್ಯಾರ್ಥಿಯೋರ್ವನ ಜನಿವಾರ ತೆಗೆಸಿದ್ದಾರೆ ಎನ್ನಲಾಗಿದೆ. ಇಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆದಿದ್ದು, ಶ್ರೀಪಾದ ಪಾಟೀಲ್ ಎಂಬ ವಿದ್ಯಾರ್ಥಿ ನೀಟ್ ಪರೀಕ್ಷೆ ಬರೆಯಲು ತೆರಳಿದಾಗ ಅಧಿಕಾರಿಗಳು ಜನಿವಾರ ತೆಗೆದು ಬರಲು ಸೂಚಿಸಿದ್ದಾರೆ. ಕೊನೆಗೆ ಈ ವಿದ್ಯಾರ್ಥಿಯು ಜನಿವಾರ ತೆಗೆದು ಪರೀಕ್ಷೆಗೆ ಬರೆದಿದ್ದಾನೆ.
ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಸೇಂಟ್ ಮೇರಿ ಶಾಲೆ ಮುಂದೆ ಬ್ರಾಹ್ಮಣ ಸಮಾಜ ಧಾವಿಸಿ ಪ್ರತಿಭಟನೆ ನಡೆಸಿದ್ದು, ಸರ್ಕಾರ ಈ ವಿಚಾರದ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಜನಿವಾರ ತೆಗೆಸಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.