ಬೆಂಗಳೂರು : ಹಿರಿಯ ನಟ, ರಾಜಕಾರಣಿ ಜಗ್ಗೇಶ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಸಖತ್ ಸದ್ದು ಮಾಡುತ್ತಿದೆ. ಈ ಟ್ವೀಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರರಂಗದ ಪ್ರಸ್ತುತ ಸ್ಥಿತಿಯ ಬಗ್ಗೆ ಟ್ವೀಟ್ ಮಾಡಿದ್ದು, ಇತ್ತೀಚೆಗಿನ ಚಿತ್ರರಂಗದಲ್ಲಿ ಕಂಡುಬರುತ್ತಿರುವ ಅಹಂಕಾರಪೂರ್ಣ ನಡವಳಿಕೆ, ಹಿರಿಯ ಕಲಾವಿದರ ವಿರುದ್ಧ ಬರುವ ಆಕ್ಷೇಪಾರ್ಹ ಟಿಪ್ಪಣಿಗಳ ವಿರುದ್ಧ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಅತ್ಯಾಚರ ಪ್ರಕರಣದಡಿ ಪೊಲೀಸರ ಅತಿಥಿಯಾಗಿರುವ ಮಡೆನೂರು ಮನು ಮಾತನಾಡಿರುವ ಆಡಿಯೋ ರಿಲೀಸ್ ಆಗಿದ್ದು, ಆಡಿಯೋನಲ್ಲಿ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿರುವ ಮಡೆನೂರು ಮನು, ಶಿವಣ್ಣ ಇನ್ನು ಐದಾರು ವರ್ಷ ಬದುಕಿದ್ದರೆ ಹೆಚ್ಚು ಆಮೇಲೆ ಸತ್ತು ಹೋಗುತ್ತಾನೆ. ಧ್ರುವ ಸರ್ಜಾ ಇನ್ನೆಂಟು ವರ್ಷ ಮಾರ್ಕೆಟ್ನಲ್ಲಿ ಇರುತ್ತಾನೆ. ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ. ಇನ್ನು ನಾಲ್ಕು ವರ್ಷ ಕ್ರೇಜ್ ಇದ್ದರೆ ಹೆಚ್ಚು, ಇವರು ಮೂವರ ಮಧ್ಯೆ ಕಾಂಪಿಟೇಶನ್ ಕೊಡೋಕೆ ನಿಂತಿರೋ ಗಂಡು ಗಲಿ ಕಣ್ರಿ ನಾನು ಎಂದು ಬಲು ಅಹಂಕಾರದಿಂದ ಮಾತನಾಡಿದ್ದಾನೆ. ಈ ವಿಚಾರಕ್ಕೆ ಎಲ್ಲೆಡೆ ಮನು ವಿರುದ್ದ ಅಕ್ರೋಶ ವ್ಯಕ್ತವಾಗಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಸಹ ಟ್ವೀಟ್ ಮಾಡಿದ್ದು, ಶಿವಣ್ಣನ ಬಗ್ಗೆ ಭಾವನಾತ್ಮಕವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ. ಗುರುಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲಾ! ಇಂದು ಇದ್ದದ್ದು ನಾಳೆ ಇರದು – ಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೆ! ಆಯುಷ್ಯ ಬರೆಯೋದು ಬ್ರಹ್ಮ, ಚಿಲ್ಲರೆ ಮನುಷ್ಯರಲ್ಲಾ! ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು!!" ಎಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ಮೂಲಕ ಅವರು ಇತ್ತೀಚಿಗಿನ ಚಿತ್ರರಂಗದಲ್ಲಿ ನಡೆಯುತ್ತಿರುವ ಶಿಷ್ಟಾಚಾರದ ಕೊರತೆ, ಹಿರಿಯರಿಗೆ ನೀಡುವ ಗೌರವ ಮತ್ತು ಉದಂತತನದ ಬಗ್ಗೆ ಖಾರದ ಟೀಕೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಿರಿಯ ಕಲಾವಿದರ ಗೌರವವನ್ನು ಕಾಪಾಡುವುದು, ತಮಗೆ ಬಂದ ಪ್ರಸಿದ್ಧಿಗೆ ಅಹಂಕಾರವಿಲ್ಲದೆ ನಡೆಯುವುದು ನಿಜಕ್ಕೂ ಹೊಸ ತಲೆಮಾರಿಗೆ ಕಲಿಯಬೇಕಾದ ಪಾಠ ಎಂದಿದ್ದಾರೆ.
ಇನ್ನು "ಶಿವರಾಜಕುಮಾರ ಚಿತ್ರರಂಗದ ಕಿರೀಟ", "ಎಲ್ಲರನ್ನು ಪ್ರೀತಿಸುವ ಜೀವ" ಅವರಂತಹ ಸರಳತೆ ಮತ್ತು ಮೌಲ್ಯಗಳನ್ನು ಬಿಂಬಿಸುವ ಕಲಾವಿದರ ಮೇಲೆ ಇಂತಹ ದುರ್ಭಾಷೆಗಳು ವ್ಯಕ್ತವಾಗಿರುವುದು ನಿಜಕ್ಕೂ ಅನೇಕ ಕನ್ನಡಿಗರ ಹೃದಯವನ್ನು ನೋಯಿಸಿದೆ. ಅಲ್ಲದೇ ಇಂತಹವರ ಸಾವನ್ನು ಬಯಸಿದವರಿಗೆ ಕೇಡುಗಾಲ ಕಾದಿದೆ ಎಂದಿದ್ದಾರೆ. "ನೊಂದುಕೊಳ್ಳದಿರಿ ಶಿವಣ್ಣ, ನೀವು ಹಿಮಾಲಯ!" "ನಿಮಗೆ ಧೀರ್ಘಾಯುಷ್ಯ ಪ್ರಾಪ್ತಿ ಇದೆ, ನಿಮ್ಮ ಹೆತ್ತವರು, ಕನ್ನಡಿಗರ ಆಶೀರ್ವಾದ ಸದಾ ನಿಮ್ಮ ಜೊತೆಯಲ್ಲಿದೆ!" "We love you, Shivanna!" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.