ಶಿರಾ:
ಉತ್ತರ ಕರ್ನಾಟಕದ ಪ್ರಯಾಣಿಕರು ಶಿರಾದ ಮೂಲಕವೇ ಪ್ರಯಾಣ ಮಾಡಬೇಕಿದೆ. ಶಿರಾದಲ್ಲಿ ಹೆದ್ದಾರಿಗಳು ಹಾದು ಹೋಗಿವೆ. ಜೊತೆಗೆ ಶಿರಾದಿಂದ ನೇರವಾಗಿ ಬೆಂಗಳೂರಿನ ಏರ್‌ಪೋರ್ಟ್‌ಗೆ ಹೆದ್ದಾರಿ ನಿರ್ಮಾಣದ ಬಗ್ಗೆ ಶಾಸಕ ಟಿ.ಬಿ ಜಯಚಂದ್ರ ಭರವಸೆ ಕೊಟ್ಟಿದ್ದಾರೆ. ಶಿರಾ ರಸ್ತೆ ಅಭಿವೃದ್ಧಿಗೆಂದು ಸಾಕಷ್ಟು ಅನುದಾನ ಬಂದ್ರು ಕೂಡ ರಸ್ತೆಗಳಿಗೆ ಗ್ರಹಣ ಹಿಡಿದಿದೆ ಎಂದರೆ ತಪ್ಪಾಗಲಾರದು.
ಶಿರಾ ತಾಲೂಕಿನ ಬರಗೂರು - ಮದಲೂರಿಗೆ ರಸ್ತೆ ಸಂಪರ್ಕ ಕಾಮಗಾರಿ 2022ರಲ್ಲಿ ಆರಂಭವಾಗಿತ್ತು. ಆದರೆ ಕಾಮಗಾರಿ ಆರಂಭವಾಗಿ ಸುಮಾರು 3 ವರ್ಷ ಪೂರ್ಣಗೊಳ್ಳುತ್ತಿದ್ದರು ರಸ್ತೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅಲ್ಲದೆ ಈ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಲ್ಲಿದೆ ಎಂದು ಹೇಳಲಾಗುತ್ತಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಈ ರಸ್ತೆಯಲ್ಲಿ ಅತಿ ಭಾರವಾದ ವಸ್ತುಗಳಾದ ಟಿಪ್ಪರ್ ಸೇರಿ ಹಲವು ವಾಹನಗಳು ಸಂಚಾರ ಮಾಡುತ್ತಿದ್ದು ನಿರ್ಮಾಣ ಹಂತ ಸೇತುವೆಗಳು ಕುಸಿಯಲಾರಂಭಿಸಿವೆ. ಅಲ್ಲದೆ ಹೊಸದಾಗಿ ದುರಸ್ತಿಗೊಳಿಸಿರುವ ರಸ್ತೆ ಕೂಡ ಹಾಳಾಗುತ್ತಿವೆ. ಹೀಗಾಗಿ ಈ ರಸ್ತೆಯಲ್ಲಿ ಬೃಹತ್ ಗಾತ್ರದ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಬೇಕೆಂದು ಸಾರ್ವಜನಿಕರು PWD ಇಲಾಖೆಗೆ ಪತ್ರವನ್ನು ಬರೆದು ಮನವಿ ಸಲ್ಲಿಸಿದರು ಪ್ರಯೋಜನ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಬರಗೂರು-ಮದಲೂರು ರಸ್ತೆ ಕಾಮಗಾರಿ ಮುಗಿಯುವವರೆಗೂ ಬೃಹತ್ ಗಾತ್ರದ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿ, ಆದಷ್ಟು ಬೇಗ ಕಾಮಗಾರಿ ಮುಗಿಸುತ್ತಾರಾ ಎಂದು ಕಾದುನೋಡಬೇಕಿದೆ.