ಕ್ರಿಕೆಟ್ :
ಇಂಡಿಯನ್ ಪ್ರೀಮಿಯರ್ ಲೀಗ್ ನ ೧೮ನೇ ಆವೃತ್ತಿ ದಿನೇದೀನೇ ರಂಗೇರುತ್ತಿದೆ. ಪ್ರತಿನಿತ್ಯ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಮ್ಯಾಚ್‌ಗಳು ಮೂಡಿಬರ್ತಿದ್ದು ಅಭಿಮಾನಿಗಳ ಕ್ರೇಜ್ ಹೆಚ್ಚಾಗುತ್ತಿದೆ. ಈ ನಡುವೆ ಐಪಿಎಲ್‌ನಲ್ಲಿ ನಿನ್ನೆ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಫಿಕ್ಸ್ ಆಗಿತ್ತಾ ಅನ್ನೋ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಹೀಗೊಂದು ಅನುಮಾನ ಹುಟ್ಟಿಕೊಳ್ಳೋದಕ್ಕೂ ಬಲವಾದ ಕಾರಣವಿದೆ. ಅದೇನಂದ್ರೆ ಸನ್ ರೈಸರ್ಸ್ ತಂಡದ ಬ್ಯಾಟರ್ ಇಶಾನ್ ಕಿಶನ್ ಅವರ ಔಟ್ ಪ್ರಕರಣ.
ರಿಪ್ಲೇ ನೋಡಿದ ಪುಟ್ಟ ಮಗುವು ಸಹ ಇದು ನಾಟೌಟ್ ಎಂದು ಹೇಳಬಲ್ಲುದು. ಅಂಥದ್ದರಲ್ಲಿ ಇಶಾನ್ ಕಿಶನ್ ಅವರು ಪೆವಿಲಿಯನ್ ನತ್ತ ಯಾಕೆ ತೆರಳಿದರು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇನ್ನು ಈ ಪ್ರಕರಣದ ವಿಡಿಯೋ ಇದೀಗ ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದ್ದು ಬ್ಯಾಟರ್, ಬೌಲರ್ ಮತ್ತು ಅಂಪೈರ್ ಗಳ ವರ್ತನೆ ನೋಡಿದ ಬಳಿಕ ನೆಟ್ಟಿಗರು ಇದು ಮ್ಯಾಚ್ ಫಿಕ್ಸಿಂಗ್ ಅಲ್ಲದೆ ಮತ್ತಿನ್ನೇನು ಎಂದೇ ಕೇಳುತ್ತಿದ್ದಾರೆ.
ಹೈದರಾಬಾದ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಅಪಾಯಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ಅವರು 2ನೇ ಓವರ್ ನ2ನೇ ಎಸೆತದಲ್ಲಿ ಡಕೌಟ್ ಆದರು. ಬಳಿಕ ಕ್ರೀಸಿಗೆ ಬಂದ ಇಶಾನ್ ಕಿಶನ್ ಕೇವಲ 1 ರನ್ ಗಳಿಸಿದ್ದರಷ್ಟೇ. ಈ ವೇಳೆ ವೇಗಿ ದೀಪಕ್ ಚಾಹರ್ ಎಸೆದ 3ನೇ ಓವರಿನ ಮೊದಲನೇ ಎಸೆತದಲ್ಲೇ ಔಟ್ ಆಗಿದ್ದೇ ನೆಂದು ತಾನಾಗಿಯೇ ಪೆವಿಲಿಯನ್ ಗೆ ಮರಳಿದ್ದರು.
ದೀಪಕ್ ಚಾಹರ್ ಎಸೆದ ಚೆಂಡು ಲೆಗ್ ಸೈಡ್ ನಲ್ಲಿ ಇಶಾನ್ ಕಿಶನ್ ಅವರ ತಲೆಯ ಸಮೀಪದಿಂದ ತೆರಳಿ ವಿಕೆಟ್ ಕೀಪರ್ ಕೈಯನ್ನು ಸೇರಿಕೊಂಡಿತ್ತು. ನಾಯಕ ಹಾರ್ದಿಕ್ ಬಿಟ್ಟರೆ ಬೇರಾರೂ ಅಪೀಲ್ ಮಾಡಿರಲಿಲ್ಲ. ಬೌಲರ್ ಕೂಡ ಗೊಂದಲದಲ್ಲಿದ್ದರು. ಆದರೆ ಅಂಪೈರ್ ಮಾತ್ರ ಒವರ್ ನ ಮೊದಲ ಬೌನ್ಸರ್ ಎಂದು ಭುಜದ ಮೇಲೆ ಕೈ ತೋರಿಸೋದಕ್ಕೆ ಹೋಗಿದ್ದವರು, ತಕ್ಷಣವೇ ಬದಲಾಯಿಸಿ ತಲೆ ಮೇಲೆ ಕೈಯೆತ್ತಿ ಔಟ್ ಎಂದು ತೀರ್ಪು ನೀಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಆಶ್ಚರ್ಯವೆಂದರೆ ಇಶಾನ್ ಕಿಶನ್ ಅವರಾಗಿಯೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಲು ಶುರು ಮಾಡಿದ ಮೇಲೆ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ರಿಪ್ಲೇ ವೇಳೆ ಅಲ್ಟ್ರಾ ಎಡ್ಜ್ ಟೆಕ್ನಾಲಜಿಯಲ್ಲಿಯೂ ಅವರು ನಾಟೌಟ್ ಎಂಬುದು ಸಾಬೀತಾಗಿದೆ.
ಇದೇ ಈಗ ಚರ್ಚೆಗೆ ಕಾರಣವಾಗಿದೆ. ಬೌಲರ್ ಔಟ್ ಗಾಗಿ ಅಪೀಲು ಮಾಡಲಿಲ್ಲ. ಬ್ಯಾಟರ್ ಅವರಾಗಿಯೇ ಪೆವಿಲಿಯನ್ ನತ್ತ ತೆರಳುತ್ತಾರೆ. ಆ ಬಳಿಕ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಾರೆ. ನಾನ್ ಸ್ಟ್ರೈಕರ್ ನಲ್ಲಿದ್ದ ಅಭಿಷೇಕ್ ಶರ್ಮಾ ಅವರಾಗಿದ್ದರೂ ಇಶಾನ್ ಕಿಶನ್ ಅವರನ್ನು ಕರೆದು ರಿವ್ಯೂ ತೆಗೆದುಕೊಳ್ಳಲು ಸಲಹೆ ನೀಡಬಹುದಿತ್ತು. ಅವರು ಸಹ ಸುಮ್ಮನಿದ್ದರು. ಹಾಗಿದ್ದರೆ ಇದಕ್ಕೆ ಏನರ್ಥ ಎಂದು ಕ್ರಿಕೆಟ್ ಪ್ರೇಮಿಗಳು ಪ್ರಶ್ನಿಸಿದ್ದಾರೆ. ಕೆಲವರು ಇದು ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿದ್ದರೆ, ಮತ್ತೆ ಕೆಲವರು ಇಶಾನ್ ಕಿಶನ್ ಅವರು ಮುಂಬೈ ಇಂಡಿಯನ್ಸ್ ಋಣ ತೀರಿಸಿದ್ದಾರೆ ಎಂದು ಗೇಲಿ ಮಾಡಿದ್ದಾರೆ.