IPL 2025 : ಧೋನಿ ವಿರುದ್ಧ ಹೆಚ್ಚಾಯ್ತು ಆಕ್ರೋಶ-ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗ್ತಿರೋದ್ಯಾಕೆ?

IPL 2025:

ನಿನ್ನೆ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಸಿಎಸ್‌ಕೆ ತಂಡ ತವರಿನಲ್ಲಿಯೇ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದೆ. ಈ ನಡುವೆ ನಿನ್ನೆಯ ಪಂದ್ಯದಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ತಂಡದ ಗೆಲುವಿಗೆ ಸಾಕಷ್ಟು ರನ್‌ಗಳ ಅಗತ್ಯವಿದ್ದಾಗಲೂ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದಕ್ಕೆ ಖುದ್ದು ಸಿಎಸ್‌ಕೆ ಅಭಿಮಾನಿಗಳೇ ಧೋನಿ ಮತ್ತು ಟೀಂ ಮ್ಯಾನೇಜ್‌ಮೆಂಟ್‌ ವಿರುದ್ಧ ಅಸಮಾಧಾನ ಹೊರಹಾಕ್ತಿದ್ದಾರೆ.

ಹೌದು…ಧೋನಿ ಎಂತಹ ಬ್ಯಾಟ್ಸ್‌ಮನ್‌ ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರ ಅಭಿಮಾನಿಗಳಂತೂ ಅವರನ್ನು ವರ್ಲ್ಡ್‌ ಬೆಸ್ಟ್‌ ಫಿನಿಶರ್‌ ಅಂತಲೇ ಕರೀತಾರೆ. ಹಾಗಿದ್ಮೇಲೆ ನಿನ್ನೆಯ ಪಂದ್ಯದಲ್ಲಿ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿಯೋದು ಬಿಟ್ಟು ೯ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ಯಾಕೆ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಅನುಭವಿ ಬ್ಯಾಟ್ಸ್‌ಮನ್‌ ಆಗಿರೋ ಧೋನಿ, ಆಲ್‌ರೌಂಡರ್‌ಗಳಾದ ಜಡೇಜಾ ಮತ್ತು ಅಶ್ವಿನ್‌ ಗಿಂತಲೂ ಮೊದಲೇ ಬ್ಯಾಟಿಂಗ್‌ಗೆ ಬರಬೇಕಿತ್ತು. ಆದರೆ ಅಶ್ವಿನ್‌ ಕೂಡ ಔಟಾದ ನಂತರ ಕ್ರೀಸ್‌ಗೆ ಬಂದಿದ್ದು ಖುದ್ದು ಸಿಎಸ್‌ಕೆ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ.

ಧೋನಿ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಧೋನಿ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ಇದು ತಂಡಕ್ಕೆ ಸರಿ ಹೊಂದುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಕೆಲವು ಅಭಿಮಾನಿಗಳು ಕೂಡ ಟ್ವೀಟ್‌ ಮಾಡುವ ಮೂಲಕ ನಿರಾಸೆ ಹೊರಹಾಕಿದ್ದಾರೆ. ಪಂದ್ಯ ಮುಗಿಯುವ ಹಂತದಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ನಿಜಕ್ಕೂ ನಿರಾಸೆ ಮೂಡಿಸಿದೆ, 6ನೇ ಕ್ರಮಾಂಕದಲ್ಲಿ ಬಂದು ಸಿಎಸ್‌ಕೆ ತಂಡಕ್ಕೆ ಭರವಸೆ ಮೂಡಿಸಬಹುದಿತ್ತು, ನೀವು ನಮ್ಮನ್ನು ಏಕೆ ಮರುಳು ಮಾಡುತ್ತಿದ್ದೀರಿ, ಥಲಾ? ಎಂದು ಎಂದು ಬರೆದುಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಹಾಗೆಯೆ ಇನ್ನೋರ್ವ ಅಭಿಮಾನಿ, ಕ್ರೀಡಾಂಗಣವನ್ನು ತುಂಬಿಸಿ ಹಣ ಗಳಿಸಲು ಧೋನಿ ಬ್ರಾಂಡ್ ಅನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಧೋನಿ ತಂಡದಲ್ಲಿದ್ದಾರೆ ಎಂದರೆ CSK ಬ್ರಾಂಡ್ ಮೌಲ್ಯವು ಹಾಗೆಯೇ ಉಳಿಯುತ್ತದೆ. ಧೋನಿಯನ್ನು ಕ್ರಿಕೆಟ್ ಕಾರಣಗಳಿಗಾಗಿ ಅಲ್ಲ, ವ್ಯಾಪಾರ ಉದ್ದೇಶಗಳಿಗಾಗಿ ಮಾತ್ರ ಆಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಅದೇನೆ ಇರಲಿ..ಫಿನಿಶರ್‌ ಧೋನಿ ೯ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವುದು ಸಹಜವಾಗಿಯೇ ಸಿಎಸ್‌ಕೆ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಇನ್ನೊಂದು ಕಡೆ ಬೇರೆ ತಂಡದ ಅಭಿಮಾನಿಗಳು ಮಾಹಿ ನಿಂಗೆ ವಯಸ್ಸಾಯ್ತೋ ಅಂತಾ ಕಾಲೆಳೆಯುತ್ತಿದ್ದಾರೆ.

Author:

...
Editor

ManyaSoft Admin

share
No Reviews