IPL 2025 :
ಭಾರತ ಮತ್ತು ಪಾಕಿಸ್ತಾನದ ನಡುವೆ ಸದ್ಯ ಯುದ್ಧದ ಕಾರ್ಮೋಡ ಆವರಿಸಿದೆ. ಗಡಿಯಲ್ಲಿ ದಾಳಿ-ಪ್ರತಿದಾಳಿ ನಡೆಯುತ್ತಿದ್ದು, ಪೂರ್ಣ ಪ್ರಮಾಣದ ಯುದ್ಧದ ವಾತಾವರಣ ಕಾಣಿಸ್ತಾ ಇದೆ. ಇದರಿಂದಾಗಿ ನಿನ್ನೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಎಲ್ಲಾ 16 ಪಂದ್ಯಗಳನ್ನು ಅಮಾನತುಗೊಳಿಸಲಾಗಿದೆ.
ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಬಳಿ ದಾಳಿ ನಡೆಸಿದ್ದ ಉಗ್ರರು ಬರೋಬ್ಬರಿ ೨೬ ಮಂದಿ ಪ್ರವಾಸಿಗರನ್ನು ಬಲಿ ತೆಗೆದುಕೊಂಡಿದ್ದರು. ಈ ಘಟನೆ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಇದಕ್ಕೆ ಪ್ರತಿಯಾಗಿ ಆಪರೇಷನ್ ಸಿಂಧೂರ್ ನಡೆಸಿದ್ದ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಉಗ್ರರ ಅಡಗುತಾಣಗಳ ಮೇಲೆ ಮಿಸೈಲ್ ದಾಳಿಯನ್ನು ನಡೆಸಿ ಅವುಗಳನ್ನು ಛಿದ್ರ ಛಿದ್ರಗೊಳಿಸಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಛಾಯೆ ಆವರಿಸಿದೆ. ನಿನ್ನೆಯಷ್ಟೇ ಪಾಪಿ ರಾಷ್ಟ್ರ ಪಾಕಿಸ್ತಾನ ಭಾರತದ 15 ನಗರಗಳನ್ನು ಗುರಿಯನ್ನಾಗಿಟ್ಟುಕೊಂಡು ದಾಳಿ ನಡೆಸಿತ್ತು. ಆದರೆ ಭಾರತದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಪಾಕ್‌ನ ಮಿಸೈಲ್‌ಗಳನ್ನು ಛಿದ್ರ ಛಿದ್ರಗೊಳಿಸಿತ್ತು. ಇನ್ನು ಬ್ಯಾಕ್ ಔಟ್ ಕಾರಣದಿಂದಾಗಿ ನಿನ್ನೆಯ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಇದೀಗ ಆಟಗಾರರು ಮತ್ತು ವೀಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಎಲ್ಲಾ ಪಂದ್ಯಗಳನ್ನು ಅಮಾನತುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ಐಪಿಎಲ್ 2025ರಲ್ಲಿ ಒಟ್ಟು 74 ಪಂದ್ಯಗಳು ನಡಿಬೇಕಿದ್ದವು. ಈ ಪೈಕಿ ಇಲ್ಲಿಯವರೆಗೆ 58 ಪಂದ್ಯಗಳು ಪೂರ್ಣಗೊಂಡಿವೆ. ಟೂರ್ನಿಯಲ್ಲಿ ಲೀಗ್ ಹಂತದ ಕೆಲವು ಪಂದ್ಯಗಳು ಮಾತ್ರ ಉಳಿದಿದ್ವು. ಇದಾದ ನಂತರ ಫೈನಲ್ ಸೇರಿದಂತೆ 4 ಪ್ಲೇ ಆಫ್ ಪಂದ್ಯಗಳು ನಡೆಯಬೇಕಿತ್ತು. ಆದರೆ ಇದೀಗ ಮುಂದಿನ ಎಲ್ಲಾ 16 ಪಂದ್ಯಗಳನ್ನ ಅಮಾನತುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಭಾರತೀಯ ಸೈನಿಕರ ಪರವಾಗಿ ಪೋಸ್ಟ್ ಹಾಕುವ ಮೂಲಕ ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದೆ. ನಾವು ನಮ್ಮ ಹೆಮ್ಮೆಯ ಸೈನ್ಯದ ಜೊತೆ ನಿಲ್ಲುತ್ತೇವೆ ಎಂದು ಬರೆದುಕೊಂಡು ಗೌರವ ಸಲ್ಲಿಸಿದೆ.
ಒಟ್ಟಿನಲ್ಲಿ ಭಾರತ-ಪಾಕ್ ನಡುವಣ ಯುದ್ಧದ ವಾತಾವರಣದಿಂದಾಗಿ ಐಪಿಎಲ್ ನ ಮುಂದಿನ ಪಂದ್ಯಗಳು ಸದ್ಯ ಅಮಾನತುಗೊಂಡಿದ್ದು, ಬಿಸಿಸಿಐನ ಮುಂದಿನ ಪ್ರಕಟಣೆಯ ಬಳಿಕವಷ್ಟೇ ಐಪಿಎಲ್ 2025ರ ಟೂರ್ನಿಯ ಭವಿಷ್ಯ ನಿರ್ಧಾರವಾಗಲಿದೆ.