India :
ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಪಾಕ್ ಹಾರಿಸಿದ್ದ ಡ್ರೋನ್‌ಗಳನ್ನು ಸೇನೆ ಹೊಡೆದುರುಳಿಸಿದೆ. ಇದರ ಬೆನ್ನಲ್ಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮೂರು ಸೇನೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎ.ಪಿ.ಸಿಂಗ್ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಭಾಗಿಯಾಗಿದ್ದರು. ಸಭೆಯಲ್ಲಿ ಭದ್ರತೆಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಾಗಿದೆ. ಭಾರತವು ತನ್ನ ಸಾರ್ವಭೌಮತ್ವ ರಕ್ಷಿಸಲು ಮತ್ತು ತನ್ನ ಜನರ ಸುರಕ್ಷತೆ ಖಚಿತ ಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ. ಗುರುವಾರ ಮಧ್ಯಾಹ್ನ, ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ 15 ನಗರಗಳಲ್ಲಿರುವ ಮಿಲಿಟರಿ ಚೆಕ್ಪೋಸ್ಟ್ ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಪ್ರಯತ್ನಗಳನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿವೆ.
ವಾಯುಪಡೆಯು ಚಂಡೀಗಢ ಮತ್ತು ಹರಿಯಾಣದ ಅಂಬಾಲದಲ್ಲಿ ಸಂಭಾವ್ಯ ಡ್ರೋನ್ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದೆ. ಅದರ ನಂತರ ಸೈರನ್ ಮೊಳಗಿಸಲಾಗಿದೆ. ಈ ಸಮಯದಲ್ಲಿ ಜನರು ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಲಾಗಿತ್ತು. ಜನರು ತಮ್ಮ ಮನೆಗಳಲ್ಲಿಯೇ ಇರಬೇಕು. ಉದ್ಯಾನವನದಲ್ಲಿ ಅಥವಾ ಬೀದಿಯಲ್ಲಿ ಯಾರೂ ನಿಲ್ಲಬಾರದು. ಇದನ್ನು ಹೊರತುಪಡಿಸಿ, ಮನೆಯ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ಯಾರೂ ನಿಲ್ಲಬಾರದು. ಯಾರೊಬ್ಬರ ಮನೆ ದೂರದಲ್ಲಿದ್ದರೆ, ಅವರು ಹತ್ತಿರದ ಕಟ್ಟಡಕ್ಕೆ ಹೋಗಬೇಕು ಎಂದು ಸರ್ಕಾರ ಸೂಚಿಸಿದೆ.