ಶಿರಾ : ಬಿರುಕು ಬಿಟ್ಟ ಕಟ್ಟಡದಲ್ಲೇ ಮಕ್ಕಳಿಗೆ ಪಾಠ | ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟ

ಶಿರಾ ತಾಲೂಕು ಕೆ. ಕೆ ಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಿರಾ ತಾಲೂಕು ಕೆ. ಕೆ ಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ತುಮಕೂರು

ಶಿರಾ :

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ವ್ಯಾಪ್ತಿಯ ಚಂಗಾವರ ಗ್ರಾಮ ಪಂಚಾಯಿತಿಗೆ ಸೇರಿದ ಕೆ.ಕೆ ಪಾಳ್ಯ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಬಿರುಕು ಬಿಟ್ಟಿದ್ದು, ಆಗಲೋ ಈಗಲೋ ಬೀಳುವ ಹಂತದಲ್ಲಿದೆ. ಕಟ್ಟಡದ ಹೆಂಚುಗಳು ಹೊಡೆದು ಹೋಗಿದ್ದು, ಕೊಠಡಿಯಲ್ಲಿ ನಿಂತು ಮೇಲೆ ನೋಡಿದರೆ ಆಕಾಶವೇ ಕಾಣುತ್ತದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಐತಿಹಾಸಿಕ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಬೇಕಾಗಿದೆ.

ಮಳೆಗಾಲ ಬಂತೆಂದರೆ ಸಾಕು ಒಡೆದ ಹೆಂಚಿನಿಂದ, ಬಿರುಕು ಬಿಟ್ಟ ಗೋಡೆಯಿಂದ ನೀರು ಸೋರಲು ಆರಂಭಿಸುತ್ತದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಶಾಲೆ ಮಳೆಯಿಂದ ಸೋರುತ್ತಿದ್ದರೂ ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ದುರಸ್ಥಿ ಮಾಡಲು ಮುಂದಾಗಿಲ್ಲ. ದುರಂತ ಎಂದರೆ ಮಳೆ ಬಂದರೆ ತರಗತಿಗಳಲ್ಲಿ ಪಾಠ ನಡೆಯುವುದಿಲ್ಲ. ಕೆಲ ಕೊಠಡಿಗಳಲ್ಲಿ ಮಳೆ ಬಂದು ‌ನೀರು ಸೋರಲು ಆರಂಭವಾದರೆ ಮಕ್ಕಳು ನಿಂತುಕೊಂಡು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲವೇ ಬೇರೆ ತರಗತಿಯ ವಿದ್ಯಾರ್ಥಿಗಳೊಂದಿಗೆ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.

ಈ ಶಾಲೆಯಲ್ಲಿ ಸುಮಾರು 29 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಈ ಶಾಲೆಯಲ್ಲಿ 7 ಕೊಠಡಿಗಳ ಪೈಕಿ 5 ಕೊಠಡಿಗಳು ದುರಸ್ಥಿಯಲ್ಲಿದೆ. ಗೋಡೆಗಳಲ್ಲಿ ಬಿರುಕು ಬಿಟ್ಟಿದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುವಂತಾಗಿದೆ. ಹೀಗಾಗಿ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ.  ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆಯನ್ನು ದುರಸ್ಥಿ ಮಾಡಿ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುವು ಮಾಡಿಕೊಡಬೇಕಿದೆ ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

Author:

...
Editor

ManyaSoft Admin

Ads in Post
share
No Reviews