ಗುಬ್ಬಿ:
ನಡೆದ ಹೋದ ತುಮುಲ್ ಚುನಾವಣೆ ಬಗ್ಗೆ ಪದೇ ಪದೇ ಮಾತನಾಡಲು ನನಗೆ ಇಷ್ಟವಿಲ್ಲ, ಸಾಮಾಜಿಕ ಜಾಲತಾಣ ಎಂದರೆ ಅನೇಕ ಪೋಸ್ಟ್ ಗಳನ್ನು ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಹಾಕುವುದು ಸಹಜ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಅತೀ ಶೀಘ್ರದಲ್ಲಿ ರಾಜೀನಾಮೆ ಎಂಬ ನಿಂದನೆ ಬರಹದ ವಿಚಾರಕ್ಕೆ ಸಂಬಂಧಿಸಿದಂತೆ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಪಟ್ಟರಾವುತನಹಳ್ಳಿ ಮತ್ತು ಚಿಕ್ಕಹೆಡಗೀಹಳ್ಳಿ ಗ್ರಾಮದಲ್ಲಿ ಸಿ. ಸಿ ರಸ್ತೆ ಕಾಮಗಾರಿ ಮತ್ತು ಚೆಕ್ ಡ್ಯಾಂ ಬ್ರಿಡ್ಜ್ ನ ಸುಮಾರು ಒಂದು ಕೋಟಿ 50 ಲಕ್ಷ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈಶಾ ಪೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆ ಹಂಚಿಕೊಂಡ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದು ಯಾರ ಜೊತೆಗೂ ಎಲ್ಲಿಯೂ ಹೋಗಬಾರದು ಎಂದು ಯಾರು ಹೇಳಿಲ್ಲ, ಯಾರು ಯಾರ ಜೊತೆ ಬೇಕಾದರೂ ಹೋಗಬಹುದು ಹೀಗಿರುವಾಗ ಡಿಕೆ ಶಿವಕುಮಾರ್ ಅವರ ತಪ್ಪೇನಿದೆ, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕರೆದರೆ ನಾನೇ ಹೋಗುತ್ತೇನೆ ಅದಕ್ಕೆ ಮಾಧ್ಯಮಗಳು ರಾಜಕೀಯದ ಬಣ್ಣ ಬಳಿಯುವುದು ತರವಲ್ಲ ಎಂದರು. ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಿರೋಧ ಪಕ್ಷಗಳು ಸಲ್ಲದ ಆರೋಪ ಮಾಡಿ ಗೂಬೆ ಕೂರಿಸುವ ಕೆಲಸ ನಿರಂತರವಾಗಿ ಮಾಡುತ್ತಿರುತ್ತವೆ ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಹಾಗೆಯೇ ಅದರಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಒಬ್ಬರು ಎಂದು ತಿಳಿಸಿದರು.