ಚಿತ್ರದುರ್ಗವು ಏಳು ಸುತ್ತಿನ ಕಲ್ಲಿನ ಕೋಟೆಗೆ ಹೆಸರುವಾಸಿಯಾಗಿದೆ. ಸುಮಾರು ೩೫ ರಹಸ್ಯ ಪ್ರವೇಶದ್ವಾರಗಳನ್ನು ಹೊಂದಿರುವ ಭದ್ರ ಕೋಟೆ ಇದಾಗಿದ್ದು. ಕೋಟೆಯ ಅಂಕು ಡೊಂಕಾದ ಮಾರ್ಗಗಳು ಶತ್ರು ಸೈನಿಕರಿಗೆ ಕ್ಲಿಷ್ಟ ಪರಿಸ್ಥಿತಿಗೆ ಒಳಗಾಗುವಂತೆ ಮಾಡುತ್ತಿತ್ತು. ಸುಭದ್ರವಾಗಿರುವ ಚಿತ್ರದುರ್ಗ ಕೋಟೆಯನ್ನು ಮೂಲತಃ 11 ನೇ ಶತಮಾನದಲ್ಲಿ ಅಂದಿನ ಚಾಲುಕ್ಯ ಸಾಮ್ರಾಜ್ಯದ ಆಡಳಿತಗಾರರು ನಿರ್ಮಿಸಿದ್ದರು. ಕಾಲಾನಂತರದಲ್ಲಿ ಈ ಕೋಟೆ ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿತ್ತು.
ಸುಮಾರು 1,500 ಎಕರೆ ವಿಸ್ತೀರ್ಣವನ್ನು ಹೊಂದಿರುವ ಈ ಭವ್ಯವಾದ ರಚನೆಯು ಏಳು ಎತ್ತರದ ಗೋಡೆಗಳಿಂದ ಆವೃತವಾದ ಬೆಟ್ಟದ ಮೇಲೆ ನೆಲೆಗೊಂಡಿದ್ದು, ದಕ್ಷಿಣ ಭಾರತದ ಅತ್ಯಂತ ಪ್ರಭಾವಶಾಲಿ ಕೋಟೆಗಳಲ್ಲಿ ಒಂದಾಗಿದೆ. ಚಿತ್ರದುರ್ಗವನ್ನು “ಕಲ್ಲಿನ ಕೋಟೆ” ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿ ವಿಸ್ಮಯಕಾರಿ ದೃಶ್ಯಗಳು, ಪುರಾತನವಾದ ದೇವಾಲಯಗಳು, ಶೌರ್ಯದಿಂದ ತುಂಬಿದ ಇತಿಹಾಸದ ನಿದರ್ಶನಗಳಿವೆ. ದಂತ ಕಥೆಯು, ಭೀಮನು ರಾಕ್ಷಸ ಹಿಡಿಂಬಾಸುರನನ್ನು ವಧಿಸಿ, ಅವನ ಸಹೋದರಿ ಹಿಡಿಂಬಿಯನ್ನು ವಿವಾಹವಾದನು ಎಂದು ಹೇಳುತ್ತದೆ. ಇಲ್ಲಿ ಅನೇಕ ರಾಜವಂಶಿಕರು ಆಳ್ವಿಕೆ ಮಾಡಿದ್ದಾರೆ.
ಈ ಸುಂದರವಾದ ಕೋಟೆಯ ಒಳಭಾಗದಲ್ಲಿ ಸಂಪಿಗೆ ಸಿದ್ದೇಶ್ವರ, ಹಿಡಿಂಬೇಶ್ವರ, ಫಲ್ಗುಣೇಶ್ವರ, ಗೋಪಾಲಕೃಷ್ಣ, ಆಂಜನೇಯ, ಬಸವ ಇನ್ನು ಹಲವಾರು ದೇವರುಗಳು ದೇವಾಲಯಗಳಿವೆ. ಇಲ್ಲಿನ ಹಿಡಿಂಬೇಶ್ವರ ದೇವಾಲಯದಲ್ಲಿ ದೊಡ್ಡ ಒಂದು ಮೂಳೆಯ ತುಂಡನ್ನು ನೀವು ಕಾಣಬಹುದು. ಈ ಮೂಳೆಯನ್ನು ಹಿಡಂಬಾಸುರ ರಾಕ್ಷಸನ ಹಲ್ಲು ಎಂದು ಹೇಳಲಾಗುತ್ತದೆ. ಈ ಕೋಟೆಯ ಅತ್ಯಂತ ಆಕರ್ಷಣೀಯವಾದ ಸ್ಥಳವೆಂದರೆ ಅದು, ಒನಕೆ ಓಬವ್ವನ ಕಿಂಡಿ. ಇಲ್ಲಿನ ಕಿಂಡಿಗೆ ವೀರ ಮಹಿಳೆ ಓಬವ್ವ ಅವರ ಹೆಸರನ್ನು ಇಡಲಾಗಿದೆ.
ಚಿತ್ರದುರ್ಗಕ್ಕೆ ತಲುಪುವುದು ಹೇಗೆಂದರೆ? ಚಿತ್ರದುರ್ಗಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಸುಮಾರು ೨೦೦ ಕಿ.ಮೀ ದೂರದಲ್ಲಿದೆ. ಇಲ್ಲಿಂದ ಖಾಸಗಿ ಕಾರ್, ಖಾಸಗಿ ಬಸ್ ಅಥವಾ ಸರ್ಕಾರಿ ಬಸ್ಗಳ ಮೂಲಕ ಸುಲಭವಾಗಿ ತಲುಪಬಹುದು.
ಚಿತ್ರದುರ್ಗಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ, ಅದು ಚಿತ್ರದುರ್ಗ ರೈಲು ನಿಲ್ದಾಣವಾಗಿದೆ. ಇಲ್ಲಿಗೆ ಅನೇಕ ನಗರದ ರೈಲುಗಳು ಸಂಪರ್ಕವನ್ನು ಹೊಂದಿದೆ. ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ೨೦೦ ಕಿ.ಮೀ ದೂರದಲ್ಲಿದ್ದು, ನಿಯಮಿತವಾಗಿ ಸರ್ಕಾರಿ ಬಸ್ಸುಗಳು ಸೇವೆ ಒದಗಿಸುತ್ತಿವೆ.
ಚಿತ್ರದುರ್ಗಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ, ಅದು ಚಳಿಗಾಲ. ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗಿರುವುದರಿಂದ ಚಳಿಗಾಲದಲ್ಲಿ ಭೇಟಿ ನೀಡುವುದಕ್ಕೆ ಸೂಕ್ತವಾದ ಸಮಯವಾಗಿದೆ.