ಕಲಬುರಗಿ : ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ ತೀವ್ರಗೊಂಡಿದ್ದು ವರುಣನ ಆರ್ಭಟ ಜೋರಾಗಿದೆ. ಕಲುಬುರಗಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಬಿರುಗಾಳಿ ಮತ್ತು ಗುಡುಗು-ಮಿಂಚಿನ ಆರ್ಭಟ ಜನಜೀವನವನ್ನು ತತ್ತರಗೊಳಿಸಿದ್ದು, ಹಲವು ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ.
ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾನಗರ ತಾಂಡಾದಲ್ಲಿ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಮನೆ ಕುಸಿದಿದೆ. ಅನುಷಾಬಾಯಿ ಚವ್ಹಾಣ್ ಎಂಬುವವರಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅನುಷಾಬಾಯಿ ಅವರು ಮೂವರು ಹೆಣ್ಣು ಮಕ್ಕಳ ತಾಯಿ. ಅವರ ಪತಿ ಇನ್ನೊಂದು ಮದುವೆ ಮಾಡಿಕೊಂಡು ಮನೆ ಬಿಟ್ಟು ಹೋಗಿರುವುದರಿಂದ, ಮಕ್ಕಳ ಪೋಷಣೆ ಅವರ ಮೇಲೇ ಇತ್ತು. ಈಗ ಮನೆ ಕಳೆದುಕೊಂಡಿದ್ದು, ಅವರು ಬೀದಿಗೆ ಬಿದ್ದಿದ್ದಾರೆ. ಇನ್ನು ಸ್ಥಳೀಯ ಗ್ರಾಮಸ್ಥರು ಮತ್ತು ನೆರೆಹೊರೆಯವರು ಪ್ರಾಥಮಿಕ ಸಹಾಯ ಒದಗಿಸುತ್ತಿದ್ದಾರೆ.
ಆದರೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ಆಶ್ರಯ ಹಾಗೂ ಪುನರ್ವಸತಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.