ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಹಿನ್ನಲೆಯಲ್ಲಿ ಅನೇಕ ಅವಾಂತರಗಳು ಸಂಭವಿಸುತ್ತಿದ್ದು, ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಗಂಭೀರ ಘಟನೆ ನಡೆದಿದೆ.
ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಸಂಭವಿಸಿದ ಬಿರುಗಾಳಿಯ ಕಾರಣಕ್ಕೆ ಟಿನ್ ಶೆಡ್ ಮನೆ ಕುಸಿದು ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಇನ್ನು ಘಟನೆಯು ನಾರಾಯಣ ಎಂಬುವವರ ಮನೆಗೆ ಸಂಬಂಧಿಸಿದ್ದು, ಶೆಡ್ ಹಾರಿ ಹೋಗದಂತೆ ಇಟ್ಟಿದ್ದ ಸಿಮೆಂಟ್ ಇಟ್ಟಿಗೆಗಳು ಅವರ ಮತ್ತು ಕುಟುಂಬದ ಸದಸ್ಯರ ಮೈ ಮೇಲೆ ಬಿದ್ದು ಇಂತಹ ಪರಿಸ್ಥಿತಿ ಉಂಟಾಗಿದೆ.
ಈ ದುರ್ಘಟನೆಯಲ್ಲಿ ನಾರಾಯಣ, ಅವರ ಮಗ ಉಮೇಶ್ ಹಾಗೂ ಮೊಮ್ಮಗ ಸಂದೀಪ್ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಈ ಘಟನೆ ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರೆದಿದ್ದು, ಇನ್ನೂ ಹೆಚ್ಚು ಮಳೆ ಬರುವ ಸಾಧ್ಯತೆ ಇರುವುದರಿಂದ ಜನತೆ ಎಚ್ಚರಿಕೆಯಿಂದ ಇರಬೇಕೆಂದು ಇಲಾಖೆ ಸೂಚನೆ ನೀಡಿದೆ.