ಗುಬ್ಬಿ : ತುಮಕೂರಿನಲ್ಲಿ ಮತ್ತೆ ಹೇಮಾವತಿ ಕಿಚ್ಚು ಜೊರಾಗಿದೆ. ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆಯ ಕಾವು ಜೋರಾಗಿಯೇ ಇದೆ. ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಸದಸ್ಯರು ಸಭೆ ನಡೆಸಿ ಬಳಿಕ ಬಸ್ ನಿಲ್ದಾಣಕ್ಕೆ ತೆರಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ರೈತರು ಭಾಗಿಯಾಗಿ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ ನೀರು ಹಂಚಿಕೆ ಆದೇಶದ ಬಳಿಕ ಡಿಸಿಎಂ ತಮ್ಮ ಪ್ರಭಾವ ಬಳಸಿ, ದುರ್ಬಳಕೆ ಮಾಡುತ್ತಿದ್ದಾರೆ. ಇದನ್ನು ನೋಡಿಯೂ ನೋಡದಂತೆ ಶಾಸಕರು, ಸಚಿವರು ಸುಮ್ಮನಿರುವುದು ವಿಪರ್ಯಾಸವಾಗಿದೆ. ಸರ್ಕಾರಿ ಜಾಗದಲ್ಲಿ ಕೆಲಸ ಮಾಡಲು ಇದುವರೆವಿಗೂ ಆದೇಶವಿಲ್ಲ. ಅಕ್ರಮವಾಗಿ ಕೆಲಸ ನಡೆಯಲು ಅಧಿಕಾರಿಗಳೇ ಮುಂದಾಳತ್ವ ವಹಿಸಿರುವುದು ರೈತರ ದೌರ್ಭಾಗ್ಯವೇ ಸರಿ ಎಂದು ಕಿಡಿಕಾರಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ಅಕ್ರಮವಾಗಿ ಪೈಪ್ ಲೈನ್ ಮಾಡಿ ನೀರು ಹರಿಸುವುದು ಸರಿಯಲ್ಲ. ಇದರ ಬಗ್ಗೆ ಸಾವಿರಾರು ರೈತರು ವಿರೋಧ ಮಾಡಿ ಹೋರಾಟ ನಡೆಸಿದ್ದಾರೆ. ಆದರೆ ಸರ್ಕಾರಿ ಜಾಗ, ದೇವಸ್ಥಾನದ ಜಾಗವನ್ನು ಕಬಳಿಸಿ ಕೆಲಸ ಆರಂಭಿಸಿದ್ದು ಕಾನೂನು ಬಾಹಿರ ಹೀಗಾಗಿ ಹೋರಾಟ ಮುಂದುವರೆಸಿ ಬೃಹತ್ ಮಟ್ಟದಲ್ಲಿ ವಿರೋಧ ಮಾಡುತ್ತೇವೆ. ಸಾವಿರಾರು ರೈತರು ಒಗ್ಗೂಡಿ ಸರ್ಕಾರಕ್ಕೆ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರೈತಸಂಘದ ಸಿ.ಜಿ.ಲೋಕೇಶ್, ಸಿ.ಟಿ.ಕುಮಾರ್, ಗುರು ಚನ್ನಬಸವಯ್ಯ, ಯತೀಶ್, ಶಿವಕುಮಾರ್, ಸತ್ತಿಗಪ್ಪ, ಪ್ರಕಾಶ್ ಇತರರು ಇದ್ದರು.