ಶಿರಾ:
ಶಿರಾ ತಾಲೂಕಿಗೆ ಮತ್ತೆರಡು ಹೈವೇಗಳು ಬರುವುದಾಗಿ ಶಾಸಕ ಟಿ.ಬಿ. ಜಯಚಂದ್ರ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶಿರಾ ತಾಲ್ಲೂಕಿನಲ್ಲಿ ₹750 ಕೋಟಿ ವೆಚ್ಚದಲ್ಲಿ 2 ಪ್ರತ್ಯೇಕ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿ.ಬಿ. ಜಯಚಂದ್ರ ಶಿರಾ ಜನರಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 69 ರ ಶಿರಾದಿಂದ ಬಡವನಹಳ್ಳಿ ನಡುವೆ ₹585 ಕೋಟಿ ವೆಚ್ಚದಲ್ಲಿ 20.20 ಕಿ.ಮೀ ಉದ್ದದ ಚತುಷ್ಪಥ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 544ರ ಆಂಧ್ರಪ್ರದೇಶದ ಗಡಿಯಿಂದ ಶಿರಾ ನಗರದವರೆಗೆ ₹166 ಕೋಟಿ ವೆಚ್ಚದಲ್ಲಿ 13.50 ಕಿ.ಮೀ ಉದ್ದದ ಚತುಷ್ಪಥ ರಸ್ತೆ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ಜಯಚಂದ್ರ ತಿಳಿಸಿದರು.
ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದಿಂದ ಬೆಂಗಳೂರು ಅಂತರರಾಷ್ಟ್ರೀಯ ನಿಲ್ದಾಣಕ್ಕೆ ನೇರ ಸಂಪರ್ಕ ಒದಗಿಸಲು ರಾಷ್ಟ್ರೀಯ ಹೆದ್ದಾರಿ 69ರ ಶಿರಾದಿಂದ ಬೈರೇನಹಳ್ಳಿ ನಡುವೆ ₹1,380 ಕೋಟಿ ವೆಚ್ಚದಲ್ಲಿ 52.50 ಕಿ.ಮೀ ಉದ್ದದ ಚತುಷ್ಪಥ ರಸ್ತೆ ಅನುಮೋದನೆಯಾಗಿತ್ತು. ಕಾಮಗಾರಿ ವಿಳಂಬವಾಗುವುದನ್ನು ತಪ್ಪಿಸಲು ಮೊದಲ ಹಂತದಲ್ಲಿ ಶಿರಾದಿಂದ ಬಡವನಹಳ್ಳಿ ನಡುವೆ ₹585 ಕೋಟಿ ವೆಚ್ಚದಲ್ಲಿ 20.20 ಕಿ.ಮೀ ಕಾಮಗಾರಿ ಹಾಗೂ ಎರಡನೇ ಹಂತವಾಗಿ ಬಡವನಹಳ್ಳಿಯಿಂದ ಬೈರೇನಹಳ್ಳಿಯವರೆಗೆ 32.30 ಕಿ.ಮೀ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ 544ರ ಆಂಧ್ರಪ್ರದೇಶದ ಲೇಪಾಕ್ಷಿ, ಮಡಕಶಿರಾ, ಅಗಳಿ, ಕರ್ನಾಟಕದ ಗಡಿಯವರೆಗೆ 103.20 ಕಿ.ಮೀ ದ್ವಿಪಥ ರಸ್ತೆ ಅಭಿವೃದ್ಧಿ ಪಡಿಸಿದ್ದು, ಆಂಧ್ರಪ್ರದೇಶ ಗಡಿಯಿಂದ ಶಿರಾ ನಗರದವರೆಗೆ ₹166 ಕೋಟಿ ವೆಚ್ಚದಲ್ಲಿ 13.50 ಕಿ.ಮೀ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಇದಕ್ಕಾಗಿ 100 ಎಕರೆ ಭೂಸ್ವಾಧೀನ ಮಾಡಿ ಕೊಳ್ಳಬೇಕಿದೆ. ಈಗ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಬೆಂಗಳೂರಿನಿಂದ ತುಮಕೂರಿಗೆ ವರ್ಗಾವಣೆ ಯಾಗಿರುವುದರಿಂದ ತ್ವರಿತಗತಿಯಲ್ಲಿ ಭೂಸ್ವಾಧೀನ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿ 48ರ ಶಿರಾ ಬೈಪಾಸ್ ರಸ್ತೆಯ ಎರಡು ಬದಿ 3.90 ಕಿ.ಮೀ ಸರ್ವಿಸ್ ರಸ್ತೆ ಬಾಕಿ ಇದ್ದು ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ₹28 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಲ್ಲಿಸಿದ್ದಾರೆ ಎಂದರು. ಹಳೆಯ ರಾಷ್ಟ್ರೀಯ ಹೆದ್ದಾರಿ 4ರ ಏಮ್ಮೇರಹಳ್ಳಿ, ದರ್ಗಾವೃತ್ತ, ಐ.ಬಿವೃತ್ತ, ಕೆಎಸ್‌ಆರ್‌ಟಿಸಿ ಡಿಪೋವರೆಗಿನ 5.75 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿರುವ ಜಯಚಂದ್ರ ಸದ್ಯ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಈ ಅವಧಿಯಲ್ಲಿ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳನ್ನು ನೀಡಲು ಹೊರಟಿದ್ದು, ಜನತೆ ಖುಷ್ ಆಗಿದ್ದಾರೆ.