ತುಮಕೂರು:
ಇಸ್ಪೀಟು ಮತ್ತೊಂದು ಅಂತಾ ಜೂಜಾಡೋರನ್ನ ನೋಡಿದ್ದೀವಿ. ಬೆಟ್ಟಿಂಗು, ಮಟ್ಕಾ ಅಂತಾ ಹೋಗಿ ಸಿಕ್ಕಾಕಿಳ್ಳೋರನ್ನ ಕೂಡ ನೋಡಿದ್ದೀವಿ. ಆದ್ರೆ ತುಮಕೂರಿನಲ್ಲಿ ಕುದುರೆ ಟಾಂಗಾ ಗಾಡಿಗಳನ್ನೇ ರೇಸ್‌ಗೆ ಹಚ್ಚಿ ದುಡ್ಡು ಹಾಕಿ ಜೂಜಾಟ ನಡೆಸುತ್ತಿದ್ದ ಆರೋಪಿಗಳು ಪೊಲೀಸರ ಕೈಯಲ್ಲಿ ತಗ್ಲಾಕಿಕೊಂಡಿದ್ದಾರೆ.
ಹೈವೇ ರಸ್ತೆಯಲ್ಲಿ ಟಾಂಗಾ ಗಾಡಿಗಳನ್ನ ರೇಸ್‌ಗೆ ಹಚ್ಚಿ ಹಣವನ್ನ ಪಣಕ್ಕಿಟ್ಟು ಜೂಜಾಟ ನಡೆಸುತ್ತಿದ್ದ ನಾಲ್ವರನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಜಿಸಿಆರ್ ಕಾಲೋನಿಯ ಹನೀಫ್, ಮಹಮದ್ ದಸ್ತಗೀರ್, ಇರ್ಷಾದ್ ಪಾಷಾ, ಹೆಗಡೆ ಕಾಲೋನಿ ನಿವಾಸಿ ವಸೀಮ್ ಪಾಷಾ ಬಂಧಿತ ಆರೋಪಿಗಳು. ಆರೋಪಿಗಳು ತುಮಕೂರಿನ ರಿಂಗ್ ರಸ್ತೆಯಲ್ಲಿರುವ ಗೆದ್ದಲಹಳ್ಳಿ ಜಂಕ್ಷನ್ ಹತ್ತಿರದ ರೇವತಿ ಬಾರ್ ಮುಂಭಾಗದಿಂದ ಅಶ್ವಿನಿ ಆಯುರ್ವೇದಿಕ್ ಕಾಲೇಜುವರೆಗೆ ಟಾಂಗಾ ಗಾಡಿಗಳನ್ನ ರೇಸ್‌ಗೆ ಹಚ್ಚಿ, ಯಾರ ಗಾಡಿ ಮುಂದೆ ಹೋಗುತ್ತದೆ ಎಂದು ದುಡ್ಡು ಕಟ್ಟಿ ಜೂಜಾಟ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೂರದಲ್ಲಿ ನಿಂತು ನೋಡಿದ ಸಂದರ್ಭದಲ್ಲಿ ನಾಲ್ವರು ಜೂಜಾಟ ನಡೆಸುತ್ತಿರೋದು ಕಂಡುಬಂದಿದೆ. ತಕ್ಷಣವೇ ದಾಳಿ ನಡೆಸಿ ಈ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಟಾಂಗಾ ಗಾಡಿಗಳು, ಎರಡು ಕುದುರೆಗಳು ಹಾಗೂ ೫೭೦೦ ರೂಪಾಯಿ ನಗದನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಕ್ರಮ ಜರುಗಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ತುಮಕೂರು ಎಸ್‌ಪಿ ಅಶೋಕ್ ವೆಂಕಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.