ಮಂಗಳೂರು : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮುಂಬೈನ ಮಸೀವುಲ್ಲ ಎಂದು ಗುರುತಿಸಲಾಗಿದೆ.
ಆರೋಪಿಯು ದೂರುದಾರರಿಗೆ ವಿದೇಶದಲ್ಲಿ ಕೆಲಸವಿದೆ ಎಂದು ನಂಬಿಸಿ 1.65 ಲಕ್ಷ ರೂ. ಹಣವನ್ನು ಪಡೆದಿದ್ದನು. ಅಲ್ಲದೆ, ಸುಮಾರು 1 ಕೋಟಿ 82 ಲಕ್ಷ ರೂ. ವರೆಗೆ ಹಣವನ್ನು ಅನೇಕ ಯುವಕರಿಂದ ಪಡೆದು ವಂಚಿಸಿರುವ ಆರೋಪವಿದೆ. ಈ ಕುರಿತಂತೆ ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮಂಗಳೂರು ನಗರ ಸಿಸಿಬಿ ಘಟಕವು ಈಗ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಇದಕ್ಕೂ ಮುನ್ನ, 2024ರ ಡಿಸೆಂಬರ್‌ನಲ್ಲಿ, ಯಾವುದೇ ಮಾನ್ಯತೆ ಇಲ್ಲದ ಕಂಪನಿಯ ಮೂಲಕ ವಿದೇಶ ಉದ್ಯೋಗ ಭರವಸೆ ನೀಡಿದ ಆರೋಪದ ಮೇಲೆ ಇಮಿಗ್ರೇಷನ್ ಅಧಿಕಾರಿಗಳ ಶಿಪಾರಸಿನ ಮೇರೆಗೆ ಮತ್ತೊಂದು ಪ್ರಕರಣ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಈ ಎರಡು ಪ್ರಕರಣಗಳಿಗೂ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಅವುಗಳನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.