ಕೊರಟಗೆರೆ : ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ರೈತರಿಂದ ಪ್ರತಿಭಟನೆ

ಕೊರಟಗೆರೆ :

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಜಹಳ್ಳಿ ಗ್ರಾಮದ ಸರ್ವೇ ನಂಬರ್‌ 32ರಲ್ಲಿ ಸಾಗುವಳಿ ನಡೆಸುತ್ತಿರುವ ನೂರಾರು ಮಂದಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ತಾಲೂಕು ಕಚೇರಿ ಮುಂದೆ ಅವಧಾರನಹಳ್ಳಿ ಗ್ರಾಮದ ನೂರಾರು ಮಂದಿ ರೈತರು ಜಮಾಯಿಸಿ, ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

ಅಕ್ಕಜಹಳ್ಳಿಯ ಸರ್ಕಾರಿ ಜಮೀನಿನಲ್ಲಿ ಸುಮಾರು 30 ವರ್ಷಗಳಿಂದ ಅವಧಾರನಹಳ್ಳಿ ಗ್ರಾಮದ ರೈತರು ಸಾಗುವಳಿ ಮಾಡಿಕೊಂಡು ಬರ್ತಾ ಇದ್ದು, ಇಲ್ಲಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗ್ತಿದೆ ಎಂದು ಆರೋಪ ಮಾಡಲಾಗಿದೆ. ಅಲ್ಲದೇ ತೋಟಗಾರಿಕಾ ಇಲಾಖೆಯ ಅಧಿಕಾರಿಯಾದ ದೊಡ್ಡಸಾಗ್ಗೆರೆಯ ಮರಿಸ್ವಾಮಿ ರೈತರ ಮೇಲೆ ನಿರಂತರವಾಗಿ ದರ್ಪ ತೋರುವುದಲ್ಲದೇ, ರೈತರಿಗೆ ನಿರಂತರವಾಗಿ ಕಿರುಕುಳ ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡ್ತಾ ಇದ್ದಾರೆ ಎಂದು ಆರೋಪಿಸಿ ರೈತರು ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ರೈತ ಮುಖಂಡ ಬಸವರಾಜು ಮಾತನಾಡಿ ಜಮೀನು ರಹಿತ ರೈತಾಪಿ ವರ್ಗ ಕೂಲಿನಾಲಿ ಮಾಡಿಕೊಂಡು ಇದೇ ಜಮೀನನ್ನೇ ನಂಬಿ ಬಡ ಕುಟುಂಬದಲ್ಲಿ ಬದುಕುತ್ತಿದ್ದೇವೆ. ಆದರೆ ತೋಟಗಾರಿಕೆ ಇಲಾಖೆಯವರು ನಮ್ಮನ್ನು ಒಕ್ಕಲೆಬ್ಬಿಸುವಂಥ ಕೆಲಸ ಮಾಡುತ್ತಿದ್ದಾರೆ. ನಾವು ಪ್ರಾಣ ಕಳೆದುಕೊಂಡರು ಚಿಂತೆ ಇಲ್ಲ ನಾವು ಈ ಜಮೀನುಗಳನ್ನು ಬಿಟ್ಟು ಕೊಡುವುದಿಲ್ಲ. ಜಮೀನಿಗಾಗಿ ಉಗ್ರ ಹೋರಾಟ ನಡೆಸಲು ಕೂಡ ಸಿದ್ಧ ಎಂದು ಎಚ್ಚರಿಕೆ ನೀಡಿದರು.

ಇಲ್ಲಿರುವವರಿಗೆ ಯಾವುದೇ ಜಮೀನುಗಳಿಲ್ಲ ಕಳೆದ 30 ವರ್ಷಗಳಿಂದ ಇಲ್ಲಿ ಬೇಸಾಯ ಮಾಡಿಕೊಂಡು ಬಂದಿದ್ದೇವೆ. ಈಗ ನಮ್ಮನ್ನು ಹೊರ ಹಾಕಿದರೆ ನಾವು ಏನು ಮಾಡುವುದು ದಯಮಾಡಿ ನಮಗೆ ನ್ಯಾಯ ಕೊಡಬೇಕು, ಸಾಗುವಳಿ ಪತ್ರ ಕೊಡಬೇಕು ನಮಗೆ ಖಾತೆ ಪಹಣಿ ಮಾಡಿಕೊಡಬೇಕು ಎಂದು ತಹಶೀಲ್ದಾರ್‌ಗೆ ಪ್ರತಿಭಟನಾಕಾರರು ಮನವಿ ಮಾಡಿಕೊಂಡರು. ಈ ವೇಳೆ ಸಾಗುವಳಿ ಪತ್ರಕ್ಕಾಗಿ ನೂರಾರು ಮಂದಿ ರೈತರು ಪ್ರತಿಭಟನೆ ನಡೆಸಿ, ಬಳಿಕ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Author:

...
Sushmitha N

Copy Editor

prajashakthi tv

share
No Reviews