CRICKET : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪ್ಲೇಆಫ್ ಹಂತ ಹತ್ತಿರವಾಗುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಮ್ಮ ತಂಡದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಂಡಿದೆ. ಇಂಗ್ಲೆಂಡ್ ತಂಡದ ಆಯ್ಕೆ ಕಾರಣದಿಂದ, ಯುವ ಆಟಗಾರ ಜೇಕಬ್ ಬೆಥೆಲ್ ಐಪಿಎಲ್‌ನಿಂದ ಹಿಂದೆ ಸರಿಯುತ್ತಿದ್ದಾರೆ. ಅವರ ಬದಲಿಗೆ ನ್ಯೂಝಿಲೆಂಡ್‌ನ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್ ಅವರನ್ನು RCB ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.
ಆಗಸ್ಟ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಸರಣಿಗೆ ಜೇಕಬ್ ಬೆಥೆಲ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಮೇ 26ರಿಂದ ಅವರು ತಮ್ಮ ರಾಷ್ಟ್ರ ತಂಡದ ಕರ್ತವ್ಯಕ್ಕೆ ಮರಳಲಿದ್ದಾರೆ. ಈ ಹಿನ್ನೆಲೆಯಲ್ಲಿ RCB ತಂಡ ತಕ್ಷಣದ ತೀರ್ಮಾನವಾಗಿ ಸೈಫರ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಇನ್ನು 28 ವರ್ಷದ ಟಿಮ್ ಸೈಫರ್ಟ್ ಈಗಾಗಲೇ ನ್ಯೂಝಿಲೆಂಡ್ ಪರ 66 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿ, 1540 ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧಶತಕಗಳು ಸೇರಿದ್ದು, ಅವರ ಶಕ್ತಿಶಾಲಿ ಆಟಕ್ಕೆ ಸಾಕ್ಷಿಯಾಗಿದೆ. ಟಿ20ಐ ಫಾರ್ಮ್ಯಾಟ್‌ನಲ್ಲಿ ಅವರು ಬಾರಿಸಿದ 80 ಸಿಕ್ಸುಗಳು ಮತ್ತು 131 ಬೌಂಡರಿಗಳು ಅವರ ದಾಳಿಕೋರ ಶೈಲಿಗೆ ಸಾಕ್ಷಿಯಾಗಿದೆ.
ಐಪಿಎಲ್‌ನಲ್ಲಿ ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಅವಕಾಶ ದೊರಕಿದರೂ, ಅವರು ಕೇವಲ 3 ಪಂದ್ಯಗಳಲ್ಲಿ ಮಾತ್ರ ಆಡಿದ್ದು, ಒಟ್ಟು 26 ರನ್ ಗಳಿಸಿದ್ದರು. ಈ ವರ್ಷ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸದಿದ್ದರೂ, RCB ತಂಡದಲ್ಲಿ ಬದಲಿ ಆಟಗಾರನಾಗಿ ಅವಕಾಶ ಪಡೆದುಕೊಂಡಿದ್ದಾರೆ.
RCB ಈಗಾಗಲೇ ತಂಡದಲ್ಲಿ ಮತ್ತೊಂದು ಬದಲಾವಣೆ ಮಾಡಿದೆ. ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಿದ್ಧತೆಗಾಗಿ ತವರಿಗೆ ಹಿಂದಿರುಗುತ್ತಿರುವ ಹಿನ್ನೆಲೆ, ಅವರ ಬದಲಿಗೆ ಝಿಂಬಾಬ್ವೆಯ ವೇಗಿ ಬ್ಲೆಸಿಂಗ್ ಮುಝರಬಾನಿ ಅವರನ್ನು ಸೇರಿಸಿಕೊಂಡಿದೆ.