ತುಮಕೂರು:
ತುಮಕೂರು ಜಿಲ್ಲಾಸ್ಪತ್ರೆಯಲ್ಲಿನ ಕರ್ಮಕಾಂಡಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ವರದಿ ಬಿತ್ತರಿಸುತ್ತಲೇ ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಳ್ತಿಲ್ಲ. ರೋಗಿಗಳಿಗೆ ಏನೇ ಆದರೂ ನಮಗೆ ಸಂಬಂಧವೇ ಇಲ್ಲ ಅನ್ನುವಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೌದು.. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕಳೆದ 3 ದಿನಗಳಿಂದ ರಕ್ತ ಪರೀಕ್ಷಾ ಕೇಂದ್ರ ಮುಚ್ಚಿದ್ದು, ರಕ್ತಪರೀಕ್ಷೆಗೆಂದು ಬಂದವರು ಬಾಗಲಿಗೆ ಬೀಗ ಹಾಕಿರೋದನ್ನ ನೋಡಿಕೊಂಡು ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ದಿನಗಳ ಹಿಂದೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಾಗಿ ರಕ್ತಪರೀಕ್ಷಾ ಕೇಂದ್ರದ ವೈರಿಂಗ್ ಎಲ್ಲಾ ಸುಟ್ಟು ಹೋಗಿದೆಯಂತೆ. ಹೀಗಾಗಿ ರಕ್ತಪರೀಕ್ಷಾ ಕೇಂದ್ರ ಯಂತ್ರೋಪಕರಣಗಳು ಕೆಲಸ ಮಾಡುತ್ತಿಲ್ವಂತೆ. ಆದ್ರೆ ಮೂರು ದಿನ ಕಳೆದರೂ ಇದೊಂದು ಚಿಕ್ಕ ಸಮಸ್ಯೆಯನ್ನ ಬಗೆಹರಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ.
ರಕ್ತಪರೀಕ್ಷಾ ಕೇಂದ್ರದಲ್ಲಿ ಆಗಿರುವ ಸಮಸ್ಯೆಯನ್ನು ಬಗೆಹರಿಸಿ ರೋಗಿಗಳಿಗೆ ಸೌಲಭ್ಯ ಕಲ್ಪಿಸಿ ಕೊಡುವುದನ್ನು ಬಿಟ್ಟು ಇಲ್ಲಿನ ಸಿಬ್ಬಂದಿಗಳೇ ರಕ್ತಪರೀಕ್ಷೆಗೆಂದು ಬಂದಂತಹ ರೋಗಿಗಳಿಗೆ ಇನ್ನು ಮೂರು ದಿನಗಳ ಕಾಲ ರಕ್ತಪರೀಕ್ಷೆ ಮಾಡಲಾಗುವುದಿಲ್ಲ. ಆಚೆ ಎಲ್ಲಾದರೂ ಹೋಗಿ ಮಾಡಿಸಿಕೊಂಡು ಬನ್ನಿ, ಇಲ್ಲ ಹಿಂದ್ ಲ್ಯಾಬ್ ಗೆ ಹೋಗಿ ಮಾಡಿಸಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿಕೊಡ್ತಿದ್ದಾರಂತೆ.
ಇನ್ನು ದೂರದ ಊರುಗಳಿಂದ ಜಿಲ್ಲಾಸ್ಪತ್ರೆಗೆ ಬಂದು ಇಲ್ಲಿ ರಕ್ತ ಪರೀಕ್ಷೆಯ ಸೌಲಭ್ಯ ಸಿಗದೇ ಖಾಸಗಿ ಲ್ಯಾಬ್ ಗೆ ಹೋಗಿ ದುಡ್ಡು ಕೊಟ್ಟು ರಕ್ತಪರೀಕ್ಷೆ ಮಾಡಿಸಲಾಗದೇ ಇಲ್ಲಿಗೆ ಬಂದಂತಹ ರೋಗಿಗಳು ಹಾಗೂ ಸಂಬಂಧಿಕರು ಹೈರಾಣಾಗಿದ್ದಾರೆ.
ಇದೊಂದು ಸಣ್ಣ ಸಮಸ್ಯೆಯಾಗಿದ್ದು, ಇದನ್ನ ಸರಿಪಡಿಸೋದಕ್ಕೆ ಇಷ್ಟೊಂದು ವಿಳಂಬವೇಕೆ? ಜಿಲ್ಲಾಸ್ಪತ್ರೆಗೆ ಬಡರೋಗಿಗಳೇ ಬರೋದು. ಆದ್ರೆ ಇಲ್ಲಿ ರಕ್ತಪರೀಕ್ಷಾ ಸೌಲಭ್ಯವೇ ಇಲ್ಲ ಅಂದ್ರೆ ಬಡರೋಗಿಗಳು ಏನ್ಮಾಡ್ಬೇಕು. ಇದೆಲ್ಲಾ ಇಲ್ಲಿನ ಅಧಿಕಾರಿಗಳಿಗೆ ಗೊತ್ತಾಗಲ್ವಾ? ಇಲ್ಲಿರುವ ಸಿಬ್ಬಂದಿ ಕೂಡ ಬಂದವರಿಗೆ ಸರಿಯಾಗಿ ಸ್ಪಂದಿಸದೆ ಬೇಜವಾಬ್ದಾರಿ ಉತ್ತರ ಕೊಟ್ಟು ಕಳುಹಿಸುತ್ತಿದ್ದಾರೆ ಎಂದು ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಪೋಷಕರು ಬೇಸರ ವ್ಯಕ್ತಪಡಿಸಿದ್ರು.
ಅದೇನೆ ಇರಲಿ.. ಇನ್ನಾದರೂ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ತಪ್ಪನ್ನ ಅರ್ಥೈಸಿಕೊಂಡು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ