ಬೆಂಗಳೂರು : ಅಡ್ರೆಸ್ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ. ಈ ಘಟನೆಯ ನಂತರ ಡೆಲಿವರಿ ಕಂಪನಿ ಗ್ರಾಹಕನಿಗೆ ಕ್ಷಮೆ ಕೇಳಿದೆ.
ಮೇ 21ರಂದು ಶಶಾಂಕ್ ಅವರ ಪತ್ನಿ ಒಂದು ಆ್ಯಪ್ ಮೂಲಕ ದಿನಸಿ ಸಾಮಗ್ರಿ ಆರ್ಡರ್ ಮಾಡಿದ್ದರು. ಡೆಲಿವರಿ ಬಾಯ್ ವಿಷ್ಣುವರ್ಧನ್ ಎಂಬಾತ ವಸ್ತುಗಳನ್ನು ತಲುಪಿಸಲು ಬಂದಾಗ, ಅಡ್ರೆಸ್ ಬಗ್ಗೆ ಸಂಭವಿಸಿದ ಗೊಂದಲದ ಮಧ್ಯೆ ವಾಗ್ವಾದ ಉಂಟಾಯಿತು. ಶಶಾಂಕ್ ಬಾಗಿಲಿಗೆ ಬಂದು ಸ್ಪಷ್ಟನೆ ನೀಡುತ್ತಿರುವ ಸಂದರ್ಭದಲ್ಲೇ, ವಿಷ್ಣುವರ್ಧನ್ ಹಠಾತ್ ಹಲ್ಲೆಗೆ ಮುಂದಾಗಿದ್ದಾನೆ. ಈ ಹಲ್ಲೆಯಲ್ಲಿ ಶಶಾಂಕ್ ಕಣ್ಣಿಗೆ ಗಾಯವಾಗಿದ್ದು, ದೃಶ್ಯಗಳು ಅವರ ಮನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಶಶಾಂಕ್ ಅವರು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣದ ಕುರಿತು ಎಫ್ಐಆರ್ ದಾಖಲಾಗಿದೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆಯೇ, ಸಂಬಂಧಿಸಿದ ಡೆಲಿವರಿ ಕಂಪನಿ ಶಶಾಂಕ್ ಅವರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿದೆ. ಕಂಪನಿ ಹಲ್ಲೆ ನಡೆಸಿದ ಡೆಲಿವರಿ ಬಾಯ್ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ.