ಶಿರಾ:
ಶಿರಾ ನಗರದ ದೊಡ್ಡಕೆರೆಯಲ್ಲಿ ರುಂಡ ಇಲ್ಲದ ದೇಹ ತೇಲುತ್ತಿದ್ದು, ಶಿರಾ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಬೆಳ್ಳಂ ಬೆಳಗ್ಗೆ ಕೆರೆಯಲ್ಲಿ ಶವ ತೇಲುತ್ತಿರೋದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಹೊರತೆಗೆದಾಗ ಮೃತ ದೇಹಕ್ಕೆ ರುಂಡ ಇಲ್ಲದಿರುವುದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶಿರಾದ ಆಸ್ಪತ್ರೆಗೆ ರವಾನಿಸಲಾಗಿದೆ.
ಮೂರ್ನಾಲ್ಕು ದಿನಗಳ ಹಿಂದೆ ಸುಮಾರು 35 ವರ್ಷದ ವ್ಯಕ್ತಿಯನ್ನು ಯಾರೋ ಕೊಲೆಗಡುಕರು ಕೊಲೆಗೈದು, ರುಂಡ- ದೇಹವನ್ನು ಬೇರ್ಪಡಿಸಿ ಶವವನ್ನು ಕೆರೆಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಶವ ಬೇಗ ತೇಲದಂತೆ ಮೃತ ದೇಹದ ಸೊಂಟಕ್ಕೆ ಕಲ್ಲನ್ನು ಕಟ್ಟಿ ಕೆರೆಗೆ ಎಸೆದು ಹೋಗಿರುವುದು ತಿಳಿದು ಬಂದಿದೆ, ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಕೆರೆಯಲ್ಲಿ ಈ ರೀತಿಯ ಶವ ಕಂಡು ಶಿರಾ ಹಾಗೂ ಸುತ್ತಮುತ್ತಲ ಹಳ್ಳಿಯ ಜನರು ಒಬ್ಬಂಟಿಗರಾಗಿ ಓಡಾಡಲು ಹೆದರುವಂತಾಗಿದೆ.