ಶಿರಾ:
ಶಿರಾದಿಂದ ತುಮಕೂರು ಕಡೆಗೆ ಸಾಗುವ ಸರ್ವೀಸ್ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಂದು ಕಡೆ ಸರ್ವೀಸ್ ರಸ್ತೆ ಅರ್ಧಕ್ಕೆ ಬಿಟ್ಟಿದ್ದರೆ. ಮತ್ತೊಂದೆಡೆ ಸರ್ವೀಸ್ ರಸ್ತೆ ಎಲ್ಲಿ ಅಂತಾ ಹುಡುಕುವಂತಹ ಸ್ಥಿತಿ ಇದೆ. ಅದು ಯಾಕೆಂದರೆ ಅಧಿಕಾರಿಗಳ ಯಡವಟ್ಟಿನಿಂದಾಗಿ ರಸ್ತೆ ಮಧ್ಯೆಯೇ ವಿದ್ಯುತ್ ಕಂಬ ಹಾಕಲಾಗಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ಶಿರಾ ಮೂಲಕ ತುಮಕೂರಿನ ಕಡೆಗೆ ಹೋಗುವ ಗುಮ್ಮನ ಹಳ್ಳಿ ,ಮತ್ತು ಜುಂಜರಾಮನಹಳ್ಳಿ, ಎಲೆಯೂರು, ಸಂಪರ್ಕ ಕಲ್ಪಿಸುವ ರಸ್ತೆ ಜೊತೆಗೆ ಸರ್ವೀಸ್ ರಸ್ತೆ ಹೊಂದಿಕೊಂಡಿದೆ. ಆದರೆ ಈ ಸರ್ವೀಸ್ ರಸ್ತೆಯ ಮಧ್ಯೆ ಇರೋ ಮೂರು ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೇ ರಸ್ತೆ ಕಾಮಗಾರಿ ಮಾಡಲಾಗಿದೆ. ಈ ರಸ್ತೆಯಲ್ಲಿ ಏನಾದರೂ ಗೊತ್ತಿಲ್ಲದೇ ವಾಹನವನ್ನು ಚಲಾಯಿಸಿಕೊಂಡು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅಲ್ಲದೇ ವಿದ್ಯುತ್ ಕಂಬದ ಮೇಲೆ ಯಾವುದೇ ಸೂಚನ ಫಲಕಗಳಾಗಲಿ ಹಾಕಿರೋದಿಲ್ಲ, ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ದೂರು ನೀಡಿದರು ಕೂಡ ಇಲಾಖೆ ಅಧಿಕಾರಿಗಳು ಕಿವುಡರಂತೆ ವರ್ತಿಸುತ್ತಿದ್ದಾರೆ. ಇದರಿಂದ ವಾಹನ ಸವಾರರಿಗೆ ಅಪಾಯ ತಂದೊಟ್ಟಿದೆ.
ಸದ್ಯ ಸರ್ವೀಸ್ ರಸ್ತೆಯ ನಡು ಮಧ್ಯೆ ಇರುವ ವಿದ್ಯುತ್ ಕಂಬ ರಸ್ತೆಯಲ್ಲಿರುವ ಟ್ರಾನ್ಸ್ ಫರ್ಮರ್ ಕೂಡಲೇ ತೆರವು ಗೊಳಿಸಬೇಕು ಅಥವಾ ಸ್ಥಳಾಂತರಿಸುವಂತೆ ಬೆಸ್ಕಾಂ ಇಲಾಖೆ ಕೂಡಲೇ ಸ್ಪಂದಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.