CSK :
ಸತತ 5 ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಗೆಲುವಿನ ನಗೆ ಬೀರಿದೆ. ಕೊನೆಗೂ ಗ್ರೇಟ್ ಫಿನಿಷರ್ ಖ್ಯಾತಿಗೆ ತಕ್ಕಂತೆ ಧೋನಿ ಆಟವಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿನ ಕೂಪದಿಂದ ಮೇಲೆತ್ತಿದ್ದಾರೆ. ಭರ್ಜರಿ ಫಾರ್ಮ್ ನಲ್ಲಿದ್ದ ಲಕ್ನೋ ಸೂಪರ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿರುವ ಸಿಎಸ್ ಕೆ ಈ ಸೀಸನ್ ನಲ್ಲಿ 2ನೇ ಗೆಲುವು ದಾಖಲಿಸಿದೆ. ಆದರೆ ಈ ಗೆಲುವಿನ ಬೆನ್ನಲ್ಲೆ ಚೆನ್ನೈ ತಂಡದ ವಿರುದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬರ್ತಿವೆ.
ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸಿಎಸ್ ಕೆ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದ ಗೆಲುವಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬರ್ತಿವೆ. ಪಂದ್ಯದ ಟಾಸ್ ವೇಳೆ ಚೆನ್ನೈ ತಂಡದ ನಾಯಕ ಧೋನಿ ಇತರರು ಕೇಳುವಂತೆ ಟಾಸ್ ಕೂಗಿರಲಿಲ್ಲ. ಬದಲಾಗಿ ಮ್ಯಾಚ್ ರೆಫರಿ ನಾರಾಯಣ್ ಕುಟ್ಟಿ ಅವರ ಕಿವಿಯಲ್ಲಿ ತನ್ನ ನಿರ್ಧಾರ ತಿಳಿಸಿದರು. ಅತ್ತ ಟಾಸ್ ಹೆಡ್ ಬೀಳುತ್ತಿದ್ದಂತೆ ಕಾಮೆಂಟೇಟರ್ ಮುರಳಿ ಕಾರ್ತಿಕ್, ಧೋನಿ ಅವರ ಆಯ್ಕೆ ಟೇಲ್ಸ್ ಅಲ್ವಾ ಎಂದು ಕೇಳಿದ್ದಾರೆ, ಆದ್ರೆ ಮ್ಯಾಚ್ ರೆಫರಿ ಹೆಡ್ಸ್ ಎಂದಿದ್ದಾರೆ.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಪರ ರಿಷಭ್ ಪಂತ್ ಅತ್ಯಂತ ನಿಧಾನವಾಗಿ ಬ್ಯಾಟಿಂಗ್ ಬೀಸಿದ್ದು, ಅರ್ಧಶತಕ ಪೂರೈಸಲು ಬರೋಬ್ಬರಿ 42 ಎಸೆತಗಳನ್ನ ತೆಗೆದುಕೊಂಡಿದ್ದರು. ಇದೀಷ್ಟಲ್ಲದೇ ತಂಡದಲ್ಲಿ ಡೇವಿಡ್ ಮಿಲ್ಲರ್ ನಂತಹ ಸ್ಪೋಟಕ ಬ್ಯಾಟರ್ ಗಳಿದ್ರೂ ಕೊನೆಯ ಓವರ್ ತನಕ ಬಿರುಸಿನ ಹೊಡೆತಕ್ಕೇ ಮುಂದಾಗದೇ ರಿಷಭ್ ಪಂತ್ ವಿಕೆಟ್ ಕಾಯ್ದುಕೊಂಡಿದ್ದೇಕೆ? ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಅಲ್ಲದೇ ಗೆಲುವಿನತ್ತ ಸಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ಕೊನೆ ಓವರ್ ವೇಳೆ ಸ್ಪಿನ್ನರ್ ಗಳನ್ನು ಬಳಸದೇ ಇರೋದು, ಲಯವಿಲ್ಲದೆ ಬೌಲಿಂಗ್ ಮಾಡ್ತಿದ್ದ ಶಾರ್ದೂಲ್ ಠಾಕೂರ್ ನಿಂದ ಬೌಲಿಂಗ್ ಮಾಡಿಸಿದ್ಯಾಕೆ ಎಂಬೆಲ್ಲ ಪ್ರಶ್ನೆಗಳು ಕೆಲವರಲ್ಲಿ ಮೂಡ್ತಿವೆ. ಇನ್ನು ರಿಷಭ್ ಪಂತ್ ನ ಈ ನಿರ್ಧಾರದ ಬಗ್ಗೆ ಕಾಮೆಂಟೇಟರ್ ಗಳು ಸಹ ಅಚ್ಚರಿ ವ್ಯಕ್ತಪಡಿಸಿದ್ದು. ಅನುಮಾನಕ್ಕೆ ಕಾರಣವಾಗ್ತಿದೆ.
ಒಟ್ಟಿನಲ್ಲಿ ಸತತ 5 ಸೋಲಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊನೆಗೂ ಗೆಲುವು ಸಾಧಿಸಿದೆ, 2016 ಮತ್ತು 2017 ರಲ್ಲಿ ಸಹ ಸಿಎಸ್ ಕೆ ತಂಡವನ್ನು ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಕಾರಣದಿಂದ ಬ್ಯಾನ್ ಮಾಡಲಾಗಿತ್ತು, ಇದೀಗ ಮತ್ತೆ ಸಿಎಸ್ ಕೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಫಿಕ್ಸಿಂಗ್ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಪರವಿರೋಧದ ಚರ್ಚೆಗಳು ಕೂಡ ಶುರುವಾಗಿವೆ.