ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಉಸಿರಾಟ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವ ಎಲ್ಲ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಬೇಕೆಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ದಿನೇಶ್ ಗುಂಡೂರಾವ್, ಒಂದು ತಿಂಗಳಿಗಾಗುವಷ್ಟು ಟೆಸ್ಟ್ ಕಿಟ್ ತೆಗೆದಿಡುವಂತೆ ಸೂಚನೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 35 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಈ ಪೈಕಿ 32 ಪ್ರಕರಣಗಳು ಬೆಂಗಳೂರಿನಲ್ಲಿ ಕಂಡುಬಂದಿವೆ. ಭಯಭೀತರಾಗದೆ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಚಿವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಟೆಸ್ಟ್ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ, ಒಂದು ತಿಂಗಳಿಗಾಗುವಷ್ಟು ಟೆಸ್ಟ್ ಕಿಟ್‌ಗಳನ್ನು ಮುಂಗಡವಾಗಿ ಖರೀದಿಸಿ ಎಲ್ಲಾ ಆಸ್ಪತ್ರೆಗಳಿಗೆ ಪೂರೈಸಲು ಸೂಚಿಸಲಾಗಿದೆ. ಇದೇ ವೇಳೆ, ತಾಂತ್ರಿಕ ಸಲಹಾ ಸಮಿತಿಯೊಂದಿಗೆ ನಡೆದ ಸಭೆಯಲ್ಲಿ ಮೇ 25ರಿಂದ ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ.