ಬೆಂಗಳೂರು : ಮಹಾಮಾರಿ ಕೊರೊನಾ ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ್ದು, ಬೆಂಗಳೂರಿನ ಮಲ್ಲೇಶ್ವರಂ ಹಾಗೂ ರಾಜಾಜಿನಗರದಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮಲ್ಲೇಶ್ವರಂನ 45 ವರ್ಷದ ವ್ಯಕ್ತಿಗೂ, ರಾಜಾಜಿನಗರದ 38 ವರ್ಷದ ವ್ಯಕ್ತಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಸೋಂಕು ಕಾಣಿಸಿಕೊಂಡಿದೆ. ಇದು ಸ್ಥಳೀಯ ಸೋಂಕು ಹರಡುತ್ತಿರುವ ಸಂಕೇತವನ್ನೆ ತೋರಿಸುತ್ತದೆ.
ಬೆಂಗಳೂರಿನ ವೈಟ್ಫೀಲ್ಡ್ನ 84 ವರ್ಷದ ವೃದ್ಧೆ ಮೇ 17ರಂದು ಕೊರೊನಾಗೆ ಬಲಿಯಾಗಿದ್ದು, ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸುಗಳು ಇವೆ. ಚಿಂತಾಜನಕವಾಗಿ, ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಸುಧಾರಣೆಯ ಹಂತದಲ್ಲಿರುವ ಎಲ್ಲಾ ಮಕ್ಕಳು ಪ್ರಸ್ತುತ ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾಜ್ಯಾದ್ಯಂತ 108 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ಐವರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ತಲಾ ಎರಡು ಕೇಸುಗಳು ಮತ್ತು ವಿಜಯನಗರದಲ್ಲಿ ಒಂದು ಹೊಸ ಕೇಸು ಪತ್ತೆಯಾಗಿದೆ. ಬೆಂಗಳುರಿನ ಮಲ್ಲೇಶ್ವರಂ ಮತ್ತು ರಾಜಾಜಿನಗರದ ಸೋಂಕಿತರನ್ನು ಹೋಂ ಐಸೋಲೇಷನ್ನಲ್ಲಿ ಇರಿಸಲಾಗಿದೆ.
ಇನ್ನು ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಚತೆ ಪಾಲಿಸುವುದು ಅನಿವಾರ್ಯವಾಗಿದೆ.