ರಾಜ್ಯ :
ಇಂದಿಗೂ ಎಲ್ಲೆಡೆ ಈ ನಕಲಿ ಮದ್ಯ ಮಾರಾಟ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ನಕಲಿ ಮದ್ಯವನ್ನು ಸೇವಿಸಿ ಸಾವನ್ನಪ್ಪುತ್ತಿರುವ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಯಾಕೋ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪಂಜಾಬ್ನ ಅಮೃತ್ಸರ ಜಿಲ್ಲೆಯ ಮಜಿತ ಕ್ಷೇತ್ರದ 5 ಗ್ರಾಮಗಳಲ್ಲಿ ವಿಷಪೂರಿತ ಮದ್ಯ ಸೇವಿಸಿ 14 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಥಾರ್ಯೇವಾಲ್, ಮರಾರಿ ಮತ್ತು ಭಂಗಲಿ ಸೇರಿ ಒಟ್ಟು ಐದು ಗ್ರಾಮಗಳಲ್ಲಿ ಹಲವು ಜನರು ವಿಷಪೂರಿತ ಮದ್ಯ ಸೇವಿಸಿದ್ದಾರೆ. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಮದ್ಯ ಸೇವಿಸಿದ ಎಲ್ಲರ ಆರೋಗ್ಯ ಹದಗೆಟ್ಟಿದೆ. ಇನ್ನು ರಾತ್ರಿಯಿಂದಲೇ ಸಾವುಗಳು ಸಂಭವಿಸುತ್ತಿವೆ ಎನ್ನಲಾಗಿದೆ. ವಿಷಪೂರಿತ ಮದ್ಯ ಸೇವಿಸಿದವರ ಆರೋಗ್ಯ ಹದಗೆಟ್ಟ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಜಿಲ್ಲಾಧಿಕಾರಿ ಸಾಕ್ಷಿ ಸಾಹ್ನಿ ಸ್ಥಳಕ್ಕೆ ಆಗಮಿಸಿದ್ರು. ಮಜಿತಾ ಕ್ಷೇತ್ರದ ಸುಮಾರು ಮೂರು ಹಳ್ಳಿಗಳಿಗೆ ಭೇಟಿ ನೀಡಿ, ವಿಷಪೂರಿತ ಮದ್ಯ ಸೇವಿಸಿ 14 ಜನರು ಸಾವನ್ನಪ್ಪಿದರ ಬಗ್ಗೆ ಮಾಹಿತಿ ಪಡೆದುಕೊಂಡ್ರು. ನಂತರ ಮಾತನಾಡಿದ ಅವರು, ನಿನ್ನೆ ಈ ವಿಷಪೂರಿತ ಮದ್ಯ ಸೇವಿಸಿ ಸುಮಾರು 5 ಗ್ರಾಮಗಳಲ್ಲಿ ಹಲವರ ಆರೋಗ್ಯ ಹದಗೆಟ್ಟಿದೆ. ನಮ್ಮ ತಂಡ ಐದು ಗ್ರಾಮಗಳಿಗೂ ಭೇಟಿ ನೀಡಿ, ಮನೆ ಮನೆಗೆ ಹೋಗಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಕೆಲಸ ಮಾಡಿದೆ. ವಿಷಪೂರಿತ ಮದ್ಯೆ ಸೇವನೆಯಿಂದ ಹಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಮದ್ಯ ತಯಾರಿಕೆಗೆ ಬಳಸಿದ್ದ ಯಂತ್ರೋಪಕರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಎಫ್ಐಆರ್ಗಳು ದಾಖಲಾಗಿವೆ. ವಿಷಪೂರಿತ ಮದ್ಯ ಸೇವಿಸಿ 14 ಸಾವು ಮತ್ತು 6 ಜನರು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಣಿಂದರ್ ಸಿಂಗ್ ತಿಳಿಸಿದ್ದಾರೆ.