ಶಿರಾ:
ನಮ್ಮ ದೇಶವನ್ನ ಸ್ವಚ್ಚ ಮತ್ತು ಸುಂದರವಾಗಿಸಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಕೋಟಿ ಕೋಟಿ ಹಣವನ್ನು ವ್ಯಯಿಸುತ್ತಿದೆ, ಆದ್ರೆ ಇದನ್ನ ಅನುಷ್ಠಾನ ಮಾಡಿಬೇಕಾಗಿರೋರು ಕೈಕಟ್ಟಿ ಕೂತುಬಿಟ್ರೆ ಮಾತ್ರ ಇದೆಲ್ಲವೂ ವೇಸ್ಟ್ ಆಗಿಬಿಡುತ್ತೆ. ಜನರು ಮತ್ತೆ ಕೊಳಕಿನಲ್ಲಿಯೇ ಜೀವನ ನಡೆಸಬೇಕಾಗುತ್ತೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಚಂಗಾವರ ಗ್ರಾಮ ಪಂಚಾಯ್ತಿ ಜನರದ್ದು ಕೂಡ ಇದೇ ಪರಿಸ್ಥಿತಿ.
ಹೌದು.. ಚಂಗಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಚತೆ ಅನ್ನೋದೆ ಮರೀಚಿಕೆಯಾಗಿದೆ, ಇಲ್ಲಿ ಹೆಸರಿಗಷ್ಟೇ ಗ್ರಾಮ ಪಂಚಾಯ್ತಿ ಇದೆ, ಆದ್ರೆ ತಮ್ಮ ಕಚೇರಿ ಆವರಣದಲ್ಲಿನ ಸ್ವಚ್ಚತೆಯನ್ನೇ ಅವ್ರು ಮಾಡಿಕೊಳ್ತಿಲ್ಲ ಅನ್ನೋದು ಇಲ್ಲಿನ ಗ್ರಾಮಸ್ಥರು ಮಾಡ್ತಿರೋ ಆರೋಪ. ಈ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕೊಳಚೆ ನೀರು ತುಂಬಿದೆ. ಸಾಲದ್ದಕ್ಕೇ ಪಂಚಾಯ್ತಿ ಆವರಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಆವರಣ ತುಂಬೆಲ್ಲ ದುರ್ವಾಸನೆ ಬೀರ್ತಿದ್ದು, ಅಲ್ದೇ ಚರಂಡಿಗಳಲ್ಲಿ ತ್ಯಾಜ್ಯ ತುಂಬಿದ್ದು ಕೊಳಚೆ ನೀರು ನಿಂತು ಕೆಟ್ಟ ವಾಸನೆ ಬರ್ತಿದ್ದು, ಕಚೇರಿ ಕೆಲಸಕ್ಕೇ ಬರುವ ನಾಗರೀಕರೆಲ್ರೂ ಮೂಗು ಮುಚ್ಚಿಕೊಂಡೇ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಇನ್ನು ದಿನನಿತ್ಯ ಕಚೇರಿ ಕೆಲಸಕ್ಕೇಂದೇ ನೂರಾರು ಜನ ಬರ್ತಾರೆ, ಆದ್ರೆ ಜನರು ಕಚೇರಿ ಆವರಣದಲ್ಲಿ ಕುಳಿತುಕೊಳ್ಳಲು ಆಗ್ತಿಲ್ಲ, ಇನ್ನು ಕೆಲವರು ಶೌಚಾಲಯವಿದ್ರೂ ಸಹ ಬಳಸದೇ ಪಂಚಾಯ್ತಿ ಮುಖ್ಯ ದ್ವಾರದ ಪಕ್ಕ, ನೀರಿನ ಟ್ಯಾಂಕರ್ ಬಳಿ ಮೂತ್ರ ವಿಸರ್ಜನೆ ಮಾಡ್ತಾ ಇದಾರೆ. ಅಲ್ದೇ ಕಚೇರಿ ಆವರಣದ ತುಂಬೆಲ್ಲ ಪ್ಲಾಸ್ಟಿಕ್ ಕವರ್ ಗಳು ಸೇರಿದಂತೆ ತಿನ್ನುವ ಪದಾರ್ಥಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ, ಈ ಬಗ್ಗೆ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಮೌನ ವಹಿಸಿದ್ದು. ಇವರ ಮೌನ ಅಧಿಕಾರಿಗಳ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. ಅಲ್ದೇ ಕಚೇರಿ ಆವರಣದಲ್ಲೇ ಸ್ವಚ್ಚತೆ ಮರೀಚಿಕೆಯಾಗಿರುವಾಗ ಗ್ರಾಮವನ್ನ ಹೇಗೆ ಸ್ವಚ್ಛತೆ ಮಾಡ್ತಾರೆ ಎಂದು ಸಾರ್ವಜನಿಕರು ಆರೋಪ ಮಾಡ್ತಿದ್ದಾರೆ.
ಇನ್ನಾದರೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಕಚೇರಿಗೆ ಬರೋ ಸಾರ್ವಜನಿಕರಿಗೆ ಶೌಚಾಲಯ ಬಳಸುವಂತೆ ಅರಿವು ಮೂಡಿಸಿ, ಗ್ರಾಮ ಪಂಚಾಯ್ತಿ ಸ್ವಚ್ಛತೆಯ ಸಮಸ್ಯೆಗೆ ಪರಿಹಾರ ನೀಡಬೇಕಿದೆ.