ಚಿತ್ರದುರ್ಗ:
ಅದು ರಾಜಕಾರಣಿಗಳೇ ಆಗಲಿ..ಅಧಿಕಾರಿಗಳೇ ಆಗಲಿ. ಅಧಿಕಾರದ ದರ್ಪ, ಮದ ಅನ್ನೋದು ತಲೆಗೆ ಏರಿ ಬಿಟ್ರೆ ಏನೆಲ್ಲಾ ಎಡವಟ್ಟುಗಳಾಗಿಬಿಡುತ್ತೆ ಅನ್ನೋದಕ್ಕೆ ಚಿತ್ರದುರ್ಗದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಹೌದು. ಚಿತ್ರದುರ್ಗ ಪಿಎಸ್‌ಐ ಗಾದಿಲಿಂಗಪ್ಪ ಮತ್ತು ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದಾರೆ. ಖಾಕಿ ಮತ್ತು ಖಾದಿಯ ಮಾರಾಮಾರಿಯ ದೃಶ್ಯ ಫುಲ್ ವೈರಲ್ ಆಗ್ತಿದ್ದು, ರಾಜ್ಯದ ಜನರು ಇದನ್ನ ನೋಡಿ ಛೀ..ಥೂ ಅನ್ನುತ್ತಿದ್ದಾರೆ.
ಚಿತ್ರದುರ್ಗ ನಗರದ ಐಶ್ವರ್ಯಾ ಪೋರ್ಟ್ ಹೋಟೆಲ್ ಬಳಿ ನಿನ್ನೆ ತಡರಾತ್ರಿ ನಡೆದಿರುವ ಘಟನೆಯಿದು. ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ತನ್ನ ಜೊತೆ ಇದ್ದ ಇಬ್ಬರು ಸ್ನೇಹಿತರ ಜೊತೆ ಹೋಟೆಲ್‌ನ ಹೊರಗಡೆ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ಬಂದಿರುವ ಪಿಎಸ್‌ಐ ಗಾದಿಲಿಂಗಪ್ಪ ರಾತ್ರಿ ಇಷ್ಟೊತ್ತಿನಲ್ಲಿ ಏನು ಮಾಡುತ್ತಿದ್ದೀರಿ, ಮನೆಗೆ ಹೋಗಿ ಅಂತಾ ಹೇಳಿದ್ದಾರೆ. ಈ ವೇಳೆ ಹನುಮಂತೇಗೌಡ ಊಟಕ್ಕೆ ಬಂದಿದ್ದೆವು, ಹೊರಡುತ್ತೇವೆ ಸರ್ ಎಂದಾಗ ಮತ್ತೆ ಮಾತು ಮುಂದುವರೆದಿದೆ. ಈ ವೇಳೆ ಹನುಮಂತೇಗೌಡ ಅವರಿಗೆ ಪಿಎಸ್‌ಐ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಹನುಮಂತೇಗೌಡ ನಾನು ಬಿಜೆಪಿ ಜಿಲ್ಲಾಧ್ಯಕ್ಷ ಇದ್ದೀನಿ. ಯಾರಿಗೂ ತೊಂದರೆ ಮಾಡಿಲ್ಲ, ಅವಾಚ್ಯ ಶಬ್ದ ಬಳಸಬೇಡಿ ಎಂದು ಹೇಳಿದ್ದಾರಂತೆ. ಈ ವೇಳೆ ಪಿಎಸ್‌ಐ ಗಾದಿಲಿಂಗಪ್ಪ ಏಕಾಏಕಿ ಚಟಾರ್ ಎಂದು ಹನುಮಂತೇಗೌಡರ ಕೆನ್ನೆಗೆ ಬಾರಿಸಿಬಿಟ್ಟಿದ್ದಾರೆ. ಆಗ ಹನುಮಂತೇಗೌಡ ಕೂಡ ತಿರುಗಿ ಹೊಡೆದಿದ್ದಾರೆ. ಖಾಕಿ ಮತ್ತು ಖಾದಿ ಹೊಡೆದಾದುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
ಇನ್ನು ಈ ಘಟನೆಯ ಬಳಿಕ ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡರೇ ಚಿತ್ರದುರ್ಗ ನಗರ ಠಾಣೆ ಪಿಎಸ್ಐ ಗಾದಿಲಿಂಗಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ವೀಡಿಯೋ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಪಿಎಸ್ಐ ಗಾದಿಲಿಂಗಪ್ಪ ಅವರೇ ಮೊದಲು ಹನುಮಂತೇಗೌಡ ಅವರ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಪಿಎಸ್‌ಐಗೆ ಹನುಮಂತೇಗೌಡ ಹೊಡೆದಿದ್ರು. ಹೀಗಾಗಿ ವೀಡಿಯೋ ಇಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಪೊಲೀಸ್ ಇಲಾಖೆಯ ಮೇಲೆ ಮುಗಿಬಿದ್ರು.ಎಸ್ಪಿ ಕಚೇರಿಗೆ ಧಾವಿಸಿ ಪಿಎಸ್ಐ ಮೇಲೆ ದೂರು ದಾಖಲಿಸಲು ಪಟ್ಟು ಹಿಡಿದಿದ್ದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಎಂಎಲ್‌ಸಿ ಚಿದಾನಂದ್ ಗೌಡ, ಕೆ.ಎಸ್.ನವೀನ್, ಮಾಜಿ ಶಾಸಕ ತಿಪ್ಪಾರೆಡ್ಡಿ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ ನೇತೃತ್ವದಲ್ಲಿ ಎಸ್‌ಪಿ ಕಚೇರಿ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಿಎಸ್‌ಐ ವಿರುದ್ಧ ಎಫ್‌ಐಆರ್ ದಾಖಲಿಸಿ ಇಲಾಖೆ ವತಿಯಿಂದ ವಿಚಾರಣೆ ನಡೆಸಬೇಕು ಅಂತಾ ಪಟ್ಟುಹಿಡಿದ್ರು. ಬಿಜೆಪಿ ಜಿಲ್ಲಾಧ್ಯಕ್ಷನಾದರೆ ನಿನಗೆ ಕೊಂಬು ಇರುತ್ತಾ ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಪಿಎಸ್‌ಐ ಅವರೇ ಮೊದಲು ಹಲ್ಲೆ ನಡೆಸಿದ್ದಾರೆ. ಆದರೂ ಹನುಮಂತೇಗೌಡ ವಿರುದ್ಧ ದೂರು ದಾಖಲಾಗಿದೆ. ಹನುಮಂತೇಗೌಡ ಅವರು ಪ್ರತಿ ದೂರು ಸಲ್ಲಿಸಿದಾಗ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಪಿಎಸ್ಐ ಮೇಲೆ FIR ಹಾಕಿ ಇಲಾಖೆ ವಿಚಾರಣೆ ನಡೆಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು. ಕೊನೆಗೆ ಚಿತ್ರದುರ್ಗ ಎಸ್‌ಪಿ ರಂಜಿತ್ ಕುಮಾರ್ ಮದ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.