ತುಮಕೂರು:
ತುಮಕೂರು ಜಿಲ್ಲಾಸ್ಪತ್ರೆಯ ಬಗ್ಗೆ ಅದೇಷ್ಟು ಸುದ್ದಿ ಮಾಡೋದು ಹೇಳಿ. ಇವರ ಕರ್ಮಕಾಂಡಗಳ ಬಗ್ಗೆ ಸುದ್ದಿ ಮಾಡಿಮಾಡಿ ನಮಗೇ ಬೇಜಾರು ಬರ್ತಿದೆ ಹೊರತು, ಅಲ್ಲಿರುವ ದಪ್ಪಚರ್ಮದ ಅಧಿಕಾರಿಗಳು ಮಾತ್ರ ಸ್ವಲ್ಪವೂ ಬದಲಾಗ್ತಲೇ ಇಲ್ಲ. ನಮಗೆ ನಾಚಿಕೆಯೂ ಇಲ್ಲ, ಮಾನವೂ ಇಲ್ಲ, ಮರ್ಯಾದೆಯೂ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಇಲ್ಲಿನ ಅಧಿಕಾರಿಗಳು.
ಬಡಜನರೇ ಹೆಚ್ಚಾಗಿ ಹೋಗೋ ಜಿಲ್ಲಾಸ್ಪತ್ರೆಯಲ್ಲಿ ಯಾವ ವ್ಯವಸ್ಥೆಯೂ ಸರಿಯಾಗಿಲ್ಲ ಅನ್ನೋದನ್ನು ನಾವು ಪದೇಪದೇ ವರದಿ ಮಾಡ್ತಲೇ ಇದ್ದೇವೆ. ಸರಿಯಾಗಿ ಔಷಧಿಗಳು ಸಿಗ್ತಿಲ್ಲ, ಸಿಬ್ಬಂದಿ ಸರಿಯಾದ ಸಮಯಕ್ಕೆ ಬಂದು ಕೆಲಸ ಮಾಡ್ತಿಲ್ಲ. ಇಲ್ಲಿ ಬಂದಂತಹ ರೋಗಿಗಳು ಕಾದುಕಾದು ಸುಸ್ತಾಗ್ತಿದ್ದರೂ ಯಾರೂ ಕ್ಯಾರೇ ಅನ್ನಲ್ಲ ಅನ್ನೋದರ ಬಗ್ಗೆ ಕಣ್ಣಿಗೆ ಕಟ್ಟುವಂತೆ ವರದಿ ಮಾಡ್ತಾ ಇದ್ವಿ. ಆದರೆ ಈ ಬಗ್ಗೆ ಜಿಲ್ಲಾಧಿಕಾರಿಯಿರಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಕಿಂಚಿತ್ತೂ ತಲೆ ಕೆಡಿಸಿಕೊಂಡಿರಲಿಲ್ಲ. ಜಿಲ್ಲಾಸ್ಪತ್ರೆಗೆ ಬಡವರೇ ಹೋಗೋದು, ನಾಳೆ ಏನಾದ್ರೂ ಎಡವಟ್ಟಾದರೆ ನಮ್ಮ ಜಿಲ್ಲೆಗೇ ಕೆಟ್ಟ ಹೆಸರು ಬರೋದು ಅನ್ನೋದು ಗೊತ್ತಿದ್ದರೂ ಕೂಡ ಯಾರೂ ಈ ಬಗ್ಗೆ ಗಮನಹರಿಸಿರಲಿಲ್ಲ. ಆದರೀಘ ಮಕ್ಕಳ ರಕ್ಷಣಾ ಆಯೋಗ ತುಮಕೂರು ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಜಿಲ್ಲಾಸ್ಪತ್ರೆಯ ವಿರುದ್ಧ ಮಕ್ಕಳ ರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ನಾವು ಇಷ್ಟು ದಿನ ವರದಿ ಮಾಡಿದ್ದಕ್ಕೂ ಒಂದು ಸಾರ್ಥಕತೆ ಸಿಕ್ಕಂತಾಗಿದೆ.
ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ಮಕ್ಕಳ ಮಾರಾಟ ಜಾಲ ಪತ್ತೆಯಾಗಿತ್ತು. ಮಕ್ಕಳ ಮಾರಾಟದಲ್ಲಿ ತೊಡಗಿದ್ದ ಐದು ಜನರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ರಕ್ಷಣೆ ಮಾಡಿದ್ದ ಮಗುವಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಈ ವೇಳೆ ಮಗುವಿನ ಆರೋಗ್ಯ ವಿಚಾರಿಸುವ ಸಲುವಾಗಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಅವರಿಗೆ ಜಿಲ್ಲಾಸ್ಪತ್ರೆಯ ನಿಜರೂಪ ಬಯಲಾಗಿತ್ತು.
ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ವಾರ್ಡ್, ಅದರ ಪಕ್ಕದಲ್ಲೇ ಇರೋ ಮಕ್ಕಳ ಪ್ಲೇಯಿಂಗ್ ಏರಿಯಾಯಲ್ಲಿ ಸ್ವಚ್ಛತೆಯೇ ಇಲ್ಲದಿರೋದು ತಿಪ್ಪೇಸ್ವಾಮಿ ಅವರ ಗಮನಕ್ಕೆ ಬಂದಿತ್ತು. ಜೊತೆಗೆ ಜಿಲ್ಲಾಸ್ಪತ್ರೆಯ ಎನ್‌ಐಸಿಯು, ಎಸ್‌ಎನ್‌ಸಿಯು ಘಟಕದಲ್ಲಿ ಮಕ್ಕಳ ಅಗತ್ಯಕ್ಕೆ ತಕ್ಕಂತೆ ವಾರ್ಮರ್‌ಗಳು, ಫೋಟೋ ಥೆರಪಿ ಯಂತ್ರಗಳ ತೀವ್ರ ಕೊರತೆ ಇರೋದು ಕೂಡ ಅವರಿಗೆ ಕಾಣಿಸಿತ್ತು. ಒಂದೇ ವಾರ್ಮರ್‌ನಲ್ಲಿ ಎರಡರಿಂದ ಮೂರು ಮಕ್ಕಳನ್ನು ಮಲಗಿಸಿದ್ದು ಕೂಡ ಕಂಡುಬಂದಿತ್ತು. ಈ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಜಿಲ್ಲಾಸ್ಪತ್ರೆಯಲ್ಲಿ ಇದೇ ರೀತಿ ಅವ್ಯವಸ್ಥೆಯನ್ನು ಕಂಡು ಸಿಟ್ಟಾಗಿದ್ದ ಕೆ.ಟಿ.ತಿಪ್ಪೇಸ್ವಾಮಿಯವರು, ಇದನ್ನು ಸುಧಾರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿ ಬಂದಿದ್ದರೂ ಕೂಡ ಯಾವುದೇ ಬದಲಾವಣೆಯಾಗದೇ ಇರೋದರ ಬಗ್ಗೆ ಅಸಮಾಧಾನ ಹೊರಹಾಕಿದರು.
ಸದ್ಯ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಜಿಲ್ಲಾಸ್ಪತ್ರೆಯ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ನವಜಾತ ಶಿಶುಗಳ ಆರೈಕೆಗೆ ಮೂಲಸೌಲಭ್ಯ ಕಲ್ಪಿಸದ, ಜೊತೆಗೆ ಸ್ವಚ್ಛತೆಯ ಬಗ್ಗೆಯೂ ಗಮನಹರಿಸದ ಜಿಲ್ಲಾ ಆಸ್ಪತ್ರೆ ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಆಯೋಗ ದೂರು ದಾಖಲಿಸಿಕೊಂಡಿದೆ. ಇಷ್ಟು ದಿನ ನಾವು ವರದಿ ಮಾಡ್ತಿದ್ರೂ ಕೂಡ ಯಾವೊಬ್ಬ ಮೇಲಧಿಕಾರಿಯೂ ಈ ಬಗ್ಗೆ ತಲೆಕೆಡಿಸಿಕೊಳ್ತಿರಲಿಲ್ಲ. ಜನಪ್ರತಿನಿಧಿಗಳಂತೂ ಬಡವರ ಕರ್ಮ, ಅವರು ಸತ್ತರೇ ಸಾಯಲಿ ಅನ್ನೋ ರೀತಿ ಜಾಣಮೌನ ವಹಿಸಿದ್ದರು. ಇದೀಗ ಜಿಲ್ಲಾಸ್ಪತ್ರೆಯ ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಆಯೋಗವೇ ಖುದ್ದು ದೂರು ದಾಖಲಿಸಿರೋದು ನಮ್ಮ ಹೋರಾಟಕ್ಕೆ ಮತ್ತೊಂದು ಬಲ ಬಂದಂತಾಗಿದೆ.