ಚಿಕ್ಕನಾಯಕನಹಳ್ಳಿ : ನೀರಿಗಾಗಿ ಮಹಿಳೆಯರ ಜಡೆ ಜಗಳ

ಚಿಕ್ಕನಾಯಕನಹಳ್ಳಿ :

ಕಳೆದ 10- 15 ವರ್ಷದ ಹಿಂದೆ ಗ್ರಾಮಗಳ ನಲ್ಲಿ, ಬೋರ್‌ಗಳ ಮುಂದೆ ನೀರು ಹಿಡಿಯಲು ಬಂದ ಮಹಿಳೆಯರು ಜಗಳ ಆಡೋದನ್ನು ಕಂಡಿದ್ದೀವಿ. ಕಾಲ ಬದಲಾದಂತೆ ಗ್ರಾಮಗಳು ಅಭಿವೃದ್ಧಿ ಆಗಿದ್ದು, ಮನೆ ಮನೆಗೂ ನಲ್ಲಿಗಳು ಬಂದಿದ್ದು. ನೀರಿಗಾಗಿ ಆಗ್ತಿದ್ದ ಗಲಾಟೆಗಳು ಕಾಣೆಯಾಗಿದ್ವು. ಆದರೀಗ ನೀರಿಗಾಗಿ ನಾರಿಯರು ಜುಟ್ಟು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾರಿಯರ ಹೊಡೆದಾಟ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಹೌದು ಗ್ರಾಮ ಪಂಚಾಯ್ತಿ ಸದಸ್ಯೆ ಯಶೋಧಮ್ಮ ಹಾಗೂ ಮಮತಾ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಾರೇಹಳ್ಳಿಗೆ ಹರಿಯುವ ನೀರಿನ ಪೈಪ್‌ ಲೈನ್‌ ಹಾದು ಹೋಗಿದೆ. ಆದರೆ ಪೈಪ್‌ ಲೈನ್‌ ನಲ್ಲಿ ಅಕ್ರಮವಾಗಿ ಸಂಪರ್ಕ ಪಡೆದು ಯಶೋಧಮ್ಮ, ಮಮತಾ ಇಬ್ಬರು ಅಡಕೆ ತೋಟಕ್ಕೆ ನೀರು ಹಾಯಿಸಿಕೊಳ್ಳುತ್ತಿದ್ರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅಕ್ರಮ ನೀರಿನ ಸಂಪರ್ಕ ಕಡಿತ ಮಾಡಿ, ದಂಡ ವಿಧಿಸುವಂತೆ ಗ್ರಾಮಸ್ಥರು ಪಿಡಿಒ ಕೋಕಿಲಾಗೆ ದೂರು ನೀಡಿದ್ದರು. ಹೀಗಾಗಿ ಸ್ಥಳ ಪರಿಶೀಲನೆಗೆಂದು ಪಿಡಿಒ ಕೋಕಿಲಾ ಬಂದಿದ್ದ ವೇಳೆ ತೋಟದ ಮನೆಗಳಿಗೆ ನಲ್ಲಿ ಹಾಕಿಲ್ಲ. ಕರೆಂಟ್‌ ಇಲ್ಲದ ವೇಳೆ ಕುಡಿಯುವ ನೀರು ಹಿಡಿದುಕೊಳ್ಳಲು ಈ ಪೈಪ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಮ್ಮ ಬೋರ್‌ನಿಂದ ಅಡಿಕೆ ಗಿಡಗಳಿಗೆ ನೀರು ಕಟ್ಟಿದ್ದೇವೆ, ಪೈಪ್‌ಲೈನ್‌ನಿಂದ ನೀರು ಹರಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಗ್ರಾಮಸ್ಥರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ವೇಳೆ ಪಿಡಿಒ ಕೋಕಿಲಾ ಅಕ್ರಮ ನಲ್ಲಿ ಸಂಪರ್ಕ ಹೊಂದಿರುವುದನ್ನು ಬಂದ್‌ ಮಾಡುವಂತೆ ಸೂಚನೆ ನೀಡುತ್ತಿರುವಾಗಲೇ. ಮಾರ್ನಾಲ್ಕು ಮಹಿಳೆಯರು ಜಡೆ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಜಗಳ ಬಿಡಿಸಲು ಹೋದ ಎರಡು ಕಡೆಯ ಗಂಡಸರು ಕೂಡ ಕಿತ್ತಾಡಿಕೊಂಡಿದ್ದಾರೆ. ಬಟ್ಟೆ ಹರಿದುಹಾಕಿಕೊಳ್ಳುವ ಮಟ್ಟಿಗೆ ಹೊಡೆದಾಡಿಕೊಂಡಿದ್ದಾರೆ.

ಸದ್ಯ ಜಡೆ ಜಗಳ ಸಂಬಂಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು ಕ್ರಮಕ್ಕೆ ಮುಂದಾಗಿದ್ದಾರೆ. ಅದೇನೆ ಆಗಲಿ ಮನೆ ಮನೆಗೆ ನಲ್ಲಿಗಳು ಬಂದ ಬಳಿಕ ಜಡೆ ಜಗಳಗಳು ಕಡಿಮೆ ಆಗಿದ್ದು, ಇದೀಗ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಜಡೆ ಜಗಳ ಫುಲ್‌ ವೈರಲ್‌ ಆಗ್ತಿದೆ.

Author:

share
No Reviews