ಚಿಕ್ಕನಾಯಕನಹಳ್ಳಿ :
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಅದೆಷ್ಟೋ ಅಮಾಯಕ ಜೀವಗಳು ಬಲಿಯೂ ಆಗಿದ್ದಾರೆ, ಅಲ್ಲದೇ ಮನೆ ಮಠ, ಊರನ್ನೇ ಬಿಟ್ಟು ಹೋಗಿರೋ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಬೇರೆ ದಾರಿ ಇಲ್ಲ, ಮನೆ ನಿಭಾಯಿಸಲು, ಕೆಲ ತಾಪತ್ರಯಗಳಿಗೆ ಹಣ ಬೇಕೆ ಬೇಕು ಅದಕ್ಕೆ ಸಾಲದ ಅನಿವಾರ್ಯತೆ ಇದ್ದೇ ಇದೆ, ಕೈ ಸಾಲ ಸಿಗದೇ ಇರೋದರಿಂದ ಸಾಲಕ್ಕಾಗಿ ಮಹಿಳೆಯರು ಮೈಕ್ರೋ ಫೈನಾನ್ಸ್‌ಗಳ ಮೊರೆ ಹೋಗ್ತಿದ್ದಾರೆ. ಆದರೆ ಮೈಕ್ರೋ ಫೈನಾನ್ಸ್‌ಗಳ ಸಿಬ್ಬಂದಿ ಸಾಲ ಕಟ್ಟುವಂತೆ ಟಾರ್ಚರ್ ಅಷ್ಟೇ ಕೊಡೊದಷ್ಟೇ ಅಲ್ಲ ರೇಪಿಸ್ಟ್‌ಗಳಾಗಿ ಬದಲಾಗ್ತಿದ್ದಾರೆ.
ಚಿಕ್ಕನಾಯಕಹಳ್ಳಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಸಾಲ ವಸೂಲಿ ನೆಪದಲ್ಲಿ ಮನೆ ಮುಂದೆ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರೋ ಪೈಶಾಚಿಕ ಘಟನೆ ಚಿಕ್ಕನಾಯಕನಹಳ್ಳಿ ಹಂದನಕೆರೆಯಲ್ಲಿ ನಡೆದಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ದುಷ್ಕೃತ್ಯಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಚಿಕ್ಕನಾಯಕನಹಳ್ಳಿಯ IIFL ಕಂಪನಿಯ ಸಮಸ್ತ ಹೆಸರಿನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರಣ್ ಎಂಬಾತ ಸಾಲ ವಸೂಲಿಗೆ ಹಂದನಕೆರೆ ಗ್ರಾಮದ ಮನೆಯೊಂದಕ್ಕೆ ಬಂದಿದ್ದು, ಮನೆಯಲ್ಲಿ ಬಾಲಕಿ ಒಬ್ಬಳೇ ಇರೋದನ್ನು ಕಂಡು 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಲು ಮುಂದಾಗಿದ್ದಾನೆ. ಆದರೆ ಅತ್ಯಾಚಾರಕ್ಕೆ ಸ್ಪಂದಿಸದೇ ಕಿರುಚಾಡಿದ ಬಾಲಕಿ ಮೇಲೆ ಕಿರಾತಕ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ, ಅಲ್ಲದೇ ಬಾಲಕಿಯ ಕುತ್ತಿಗೆ, ಭುಜ ಸೇರಿದಂತೆ ಬಾಲಕಿಯ ದೇಹದ ಹಲವೆಡೆ ಕಚ್ಚಿ ಗಾಯಗೊಳಿಸಿ, ಎಸ್ಕೇಪ್ ಆಗಿದ್ದಾನೆ. ಈ ಪೈಶಾಚಿಕ ಕೃತ್ಯ ಏಪ್ರಿಲ್ 24 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿ ಮೇಲೆ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಪೋಷಕರು ಹಂದನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡು ಎರಡೇ ದಿನದಲ್ಲಿ ಕಿರಾತಕ ಫೈನಾನ್ಸ್ ಸಿಬ್ಬಂದಿ ಕಿರಣ್‌ನನ್ನು ಪತ್ತೆ ಹಚ್ಚಿ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಿ ಆರೋಪಿ ಕಿರಣ್ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ.