ಚಿಕ್ಕನಾಯಕನಹಳ್ಳಿ : ಮಾಟಮಂತ್ರದ ಹೆಸರಲ್ಲಿ ಜನರಿಗೆ ಅರ್ಚಕನಿಂದ ವಂಚನೆ...!

ಚಿಕ್ಕನಾಯಕನಹಳ್ಳಿ : ಹಣ ಅಂದರೆ ಹೆಣ ಕೂಡ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಇದಕ್ಕೆ ದೇವಾಲಯದಲ್ಲಿ ಪೂಜೆ ಮಾಡೋ ಅರ್ಚಕರು ಹೊರತಾಗಿಲ್ಲ. ದೇವರಿಗೆ ನಿತ್ಯ ಪೂಜೆ ಸಲ್ಲಿಸುವ ಅರ್ಚಕರೇ ದೇವರ ಹೆಸರಲ್ಲಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಪೂಜೆ, ಪುನಸ್ಕಾರ, ಮಾಟಮಂತ್ರ ಅಂತ ಹಣ ಕೊಳ್ಳೆ ಹೊಡೆಯುತ್ತಿರುವ ಚಾಳಿ ಹೆಚ್ಚಾಗುತ್ತಿದೆ. ಇತ್ತ ಮುಜಾರಾಯಿ ಇಲಾಖೆಗೆ ಸೇರಿದ ದೇವಾಲಯದ ಅರ್ಚಕನೇ ಜನರಿಗೆ ಮಂಕುಬೂದಿ ಎರಚಿದ್ದಾನೆ. ಇವನ ಕಾಟದಿಂದ ಬೇಸತ್ತ ಜನ ನೇರವಾಗಿ ತಹಶೀಲ್ದಾರ್‌ಗೆ ಮನವಿ ಮಾಡಿದ್ದಾರೆ. 

ಚಿಕ್ಕನಾಯಕನಹಳ್ಳಿ ತಾಲೂಕು ಕಸಬಾ ಹೋಬಳಿಯಲ್ಲಿರುವ 7 ಹಳ್ಳಿಗಳ ಗ್ರಾಮದೇವತೆಯಾಗಿರುವ ಶ್ರೀ ಉಡಸಲಮ್ಮ ದೇವಾಲಯದಲ್ಲಿ ಅರ್ಚಕ ಜನರಿಗೆ ವಂಚಿಸಿರುವ ಘಟನೆ ನಡೆದಿದೆ. ಅರಳಿಕೆರೆ, ಪುರ, ಜೋಡಿಕಲ್ಲೇನಹಳ್ಳಿ, ನವಿಲೆ, ಪಿನ್ನೇನಳ್ಳಿ, ಅಂಕಸಂದ್ರ ಅಣೆಕಟ್ಟೆ, ಯಾದವರಟ್ಟಿಗೆ ಸೇರುವ ಶ್ರೀ ಉಡಸಲಮ್ಮ ದೇವಾಲಯದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿರುವ ಕಾಂತರಾಜು ಎಂಬ ವ್ಯಕ್ತಿ ಮಾಟ ಮಂತ್ರ, ಪೂಜೆ ಪುನಸ್ಕಾರ ಅಂತ ಅಮಾಯಕ ಜನರಿಗೆ ವಂಚನೆ ಮಾಡ್ತಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ. 

ತನ್ನ ಮೇಲೆ ದೇವರು ಬರುತ್ತದೆ ಅಂತ ಹೇಳಿಕೊಂಡು ಕಾಂತರಾಜು ಜನರಿಗೆ ಮೋಸ ಮಾಡ್ತಿದ್ದಾನೆ ಅಂತ ಗ್ರಾಮಸ್ಥರೇ ಆರೋಪಿಸುತ್ತಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾಂತರಾಜು, ಭಕ್ತರಿಗೆ ಮಾಟ-ಮಂತ್ರ, ವಶೀಕರಣದ ಹೆಸರಿನಲ್ಲಿ ಹಣ ವಸೂಲಿ ಮಾಡ್ತಿದ್ದಾನೆ ಅಂತ ಸ್ವತಃ ಗ್ರಾಮಸ್ಥರೇ ತಹಶೀಲ್ದಾರ್‌ ಅವರಿಗೆ ಮನವಿ ಮಾಡಿದ್ದಾರೆ.

ಇನ್ನು ಈ ಪೂಜಾರಿ ಕೇವಲ ಮಾಟಮಂತ್ರ, ವಶೀಕರಣ ಪರಿಹಾರ ಮಾಡಿ ಕೊಡ್ತಿನಿ ಅಂತ ವಂಚಿಸುತ್ತಿಲ್ಲ. ಬದಲಿಗೆ ದೇವಾಲಯದ ಆದಾಯದ ಮೇಲು ಕಣ್ಣು ಹಾಕಿದ್ದಾನೆ ಅಂತ ಕೂಡ ಆರೋಪಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳೀಯರು ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಗೆ ಭೇಟಿ ನೀಡಿ ತಹಶೀಲ್ದಾರ್ ಪುರಂದರ್ ಅವರಿಗೆ ಮನವಿ ಸಲ್ಲಿಸಿ, ಆರೋಪಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ದೂರು ಸ್ವೀಕರಿಸಿದ ತಹಶೀಲ್ದಾರ್ ಪ್ರಕರಣದ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews