ಚಿಕ್ಕನಾಯಕನಹಳ್ಳಿ:
ಇಂಡಸ್ಟ್ರೀಯಲ್ ವಿಸಿಟ್ ನೆಪದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಚರ್ಚ್‌ಗೆ ಕರೆದುಕೊಂಡು ಹೋಗಿದ್ದು, ಶಿಕ್ಷಕರ ಈ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳನ್ನು ನಿನ್ನೆ ಇಂಡಸ್ಟ್ರಿಯಲ್ ವಿಸಿಟ್‌ಗೆಂದು ಕರೆದುಕೊಂಡು ಹೋಗಲಾಗಿತ್ತು. 100ಕ್ಕೂ ಹೆಚ್ಚು ಮಕ್ಕಳನ್ನು ಇಂಡಸ್ಟ್ರೀಯಲ್ ವಿಸಿಟ್ ಗೆಂದು ಶಾಲಾ ಶಿಕ್ಷಕರು ಕರೆದುಕೊಂಡು ಹೋಗಿದ್ದರು. ಮೊದಲಿಗೆ ಇಟ್ಟಿಗೆ ಮತ್ತು ಹೆಂಚಿನ ಕಾರ್ಖಾನೆಗಳಿಗೆ ಕರೆದುಕೊಂಡು ಹೋಗಿ, ಬಳಿಕ ಹುಳಿಯಾರಿನ ಕನಕ ಸರ್ಕಲ್ ಬಳಿಯ ಹೋಲಿ ಟ್ರಿನಿಟಿ ಬಿಲೀವರ್ಸ್ ಈಸ್ಟರ್ನ್ ಚರ್ಚ್‌ಗೆ ಕರೆದುಕೊಂಡು ಹೋಗಿದ್ದಾರೆ. ಇಂಡಸ್ಟ್ರೀಯಲ್ ವಿಸಿಟ್ ಹೆಸರಲ್ಲಿ ಮಕ್ಕಳನ್ನು ಚರ್ಚ್‌ಗೆ ಕರೆದುಕೊಂಡಿದ್ದು ಯಾಕೆ ಅಂತಾ ಆಕ್ರೋಶ ವ್ಯಕ್ತವಾಗ್ತಿದೆ.
ಚರ್ಚ್‌ಗೆ ಕರೆದುಕೊಂಡು ಹೋದ ವೇಳೆ ಅಲ್ಲಿ ಮಕ್ಕಳಿಗೆ ಕ್ರಿಶ್ಚಿಯನ್ ಧರ್ಮ ಬೋಧನೆ ಮಾಡಿರುವ ಆರೋಪ ಕೂಡ ಕೇಳಿಬಂದಿದೆ. ಜೊತೆಗೆ ಹಿಂದೂ ಧರ್ಮವನ್ನು ಅವಹೇಳನ ಮಾಡಲಾಗಿದೆ ಅನ್ನೋ ಆರೋಪ ಕೂಡ ಕೇಳಿಬಂದಿದ್ದು, ಶಿಕ್ಷಕರ ನಡೆಯನ್ನು ಎಬಿವಿಪಿ ಕಾರ್ಯಕರ್ತರು ಖಂಡಿಸಿದ್ದಾರೆ. ಮಕ್ಕಳಿಗೆ ಚರ್ಚ್ ಹಾಗೂ ಯೇಸು ಕ್ರಿಸ್ತನ ಬಗ್ಗೆ ತಿಳಿಸಿ ಕೊಡಿ, ಆದರೆ ಹಿಂದೂ ಧರ್ಮದ ಹೋಮ ಹವನದ ಬಗ್ಗೆ ಅವಹೇಳನ ಮಾಡಿದ್ದು ಯಾಕೆ? ಶಿಕ್ಷಣ ಇಲಾಖೆಯಿಂದ ಪಡೆದ ಅನುಮತಿಯಂತೆ ಇಂಡಸ್ಟ್ರೀಯಲ್ ವಿಸಿಟ್ ಬದಲು ಏಕಾಏಕಿ ಚರ್ಚ್‌ಗೆ ಕರೆದೊಯ್ದಿದ್ಯಾಕೆ ಅಂತಾ ಎಬಿವಿಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.