ಚಿಕ್ಕನಾಯಕನಹಳ್ಳಿ :
ರೈತ ದೇಶದ ಬೆನ್ನೆಲುಬು, ಆದರೆ ಇಡೀ ದೇಶಕ್ಕೆ ಅನ್ನ ಕೊಡೊ ರೈತನ ಸ್ಥಿತಿ ಮಾತ್ರ ಕಷ್ಟ. ಇರೋ ಅಲ್ಪ ಜಮೀನನ್ನು ಉಳಿಸಿಕೊಳ್ಳಲು ಹೆಣಗಾಡುವಂತಹ ಕೆಟ್ಟ ಸ್ಥಿತಿ ಬಂದಿದೆ. ಆಸ್ತಿ ಪಾಲು ಆದ ಬಳಿಕ ತಮ್ಮ ಪಾಲಿಗೆ ಬಂದ ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಕಚೇರಿಯಲ್ಲಿ ಅಲೆದಾಡುತ್ತಿದ್ದಾರೆ. ಸರ್ಕಾರಗಳು ಬದಲಾದಂತೆ, ನಿಯಮಗಳಲ್ಲಿಯೂ ಬದಲಾಗುತ್ತವೆ. ಇದರಿಂದ ಖಾತೆಗಾಗಿ ಪರದಾಡುವಂತಾಗಿದೆ. ಇನ್ನು ಸರ್ಕಾರ ನಾವು ಎಂದಿಗೂ ರೈತರ ಪರ ಅಂತಾ ಬರೀ ಬಡಾಯಿ ಕೊಚ್ಚಿಕೊಳ್ಳುತ್ತವೆ, ಆದರೆ ರೈತರ ಪರವಾಗಿ ಮಾತ್ರ ಕೆಲಸ ಮಾಡಿಕೊಳ್ಳಲ್ಲ. ಇದರಿಂದ ನಿತ್ಯ ತಹಶೀಲ್ದಾರ್ ಕಚೇರಿಯಲ್ಲಿ ತಮ್ಮ ಜಮೀನು ಉಳಿಸಿಕೊಳ್ಳಲು ರೈತರು ಅಲೆದಾಡುವಂತಾಗಿದೆ.
ಹೌದು, ಈಗ ಇಂತಹದ್ದೇ ಒಂದು ಪ್ರಕರಣ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದ್ದು, ರೈತ ವಿಶ್ವನಾಥ್ ಎಂಬಾತ ತಮ್ಮ ಪಾಲಿಗೆ ಬಂದ ಜಮೀನನ್ನು ಖಾತೆ ಮಾಡಿಸಿಕೊಳ್ಳಲು ತಹಶೀಲ್ದಾರ್ ಕಚೇರಿಗೆ ಅಲೆದು, ಅಲೆದು ಸಾಕಾಗಿ ಕೊನೆಗೆ ಅಧಿಕಾರಿಗಳ ವಿರುದ್ಧ ಬೇಸತ್ತು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಅಣ್ಣೆಕಟ್ಟೆ ಗ್ರಾಮದ ರೈತ ವಿಶ್ವನಾಥ್ ಎಂಬುವವರು 2024ರ ಅಕ್ಟೋಬರ್‌ನಲ್ಲಿ ಜಮೀನಿನ ಖಾತೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿ ಐದು ತಿಂಗಳಾದರೂ ಕೂಡ ಅಧಿಕಾರಿಗಳು ಖಾತೆ ಮಾಡಿಕೊಟ್ಟಿಲ್ಲ. ಸದ್ಯ ಎಲ್ಲಾ ಟೇಬಲ್ ದಾಟಿ ತಹಶೀಲ್ದಾರ್ ಟೇಬಲ್‌ವರೆಗೂ ಅರ್ಜಿ ತಲುಪಿದ್ಯಂತೆ. ಅರ್ಜಿ ಎಲ್ಲವೂ ಸರಿ ಇದ್ದರೂ ಕೂಡ ಖಾತೆ ಮಾಡದೇ ತಹಶೀಲ್ದಾರ್ ಸತಾಯಿಸುತ್ತಿದ್ದಾರೆ ಎಂದು ರೈತ ವಿಶ್ವನಾಥ್ ಆರೋಪ ಮಾಡಿದ್ದಾರೆ.
ಖಾತೆಗಾಗಿ ಅಲೆದು ಅಲೆದು ಬೇಸತ್ತ ರೈತ ವಿಶ್ವನಾಥ್ ತಹಶೀಲ್ದಾರ್ ವಿರುದ್ಧ ಸಿಡಿದೆದ್ದು, ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಇಡೀ ದಿನ ಪೂರ್ತಿ ತಹಶೀಲ್ದಾರ್ ಕಚೇರಿ ಮುಂದೆ ರೈತ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಖಾತೆ ಮಾಡಿಕೊಡದಿದ್ದರೆ ಜಮೀನು ಅಭಿವೃದ್ಧಿ ಮಾಡಲು ಆಗಲ್ಲ, ಅಲ್ಲದೇ ಉಳುಮೆ ಮಾಡಲು ಕೂಡ ಕಷ್ಟ ಆಗ್ತಿದೆ. ರೈತರ ಪರವಾಗಿ ಇದ್ದೀವಿ ಅಂತಾ ಬರೀ ಬಾಯಲ್ಲಿ ಹೇಳುವ ಬದಲು ಕೆಲಸ ಮಾಡಿ ಕೊಡಿ ಎಂದು ವಿಶ್ವನಾಥ್ ಆಗ್ರಹಿಸುತ್ತಿದ್ದಾರೆ.