ಚಿಕ್ಕನಾಯಕನಹಳ್ಳಿ :
ಕಳೆದ 3 ವರ್ಷಗಳಿಂದ ನಿಂತು ಹೋಗಿದ್ದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಇಂದು ಕಳೆಬಂದಿತ್ತು. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಶ್ರೀಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇಂದು ಅತ್ಯಂತ ವಿಜೃಂಭಣಿಯಿಂದ ಜರುಗಿತು.
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಂಭ್ರಮದಿಂದ ನೆರವೇರಿತು. ಸುಡು ಬಿಸಿಲನ್ನು ಲೆಕ್ಕಿಸದೆ ಲಕ್ಷಾಂತರ ಭಕ್ತರು ಶ್ರೀ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡು ರಥೋತ್ಸವವನ್ನು ಕಣ್ತುಂಬಿಕೊಂಡರು.
ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಇದು ವಿವಿಧ ಧಾರ್ಮಿಕ ಕೈಂಕರ್ಯವನ್ನು ಲಕ್ಷಾಂತರ ಜನರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನೆರವೇರಿತು. ಇಂದು ಬಸವ ಜಯಂತಿ ಹಿನ್ನೆಲೆ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇಂದು ಮುಂಜಾನೆಯೇ ಮಹದೇವಮ್ಮ, ಚನ್ನಬಸವಯ್ಯ ದಂಪತಿಗಳು ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಪೂಜೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ದೇವರ ಮೂರ್ತಿಯನ್ನು ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಇದೇ ವೇಳೆ ರಂಗುರಂಗಿನ ಬಾವುಟ, ಎಳನೀರ ಗೊಂಚಲು, ಬಾಳೆಗೊನೆ, ಕೊಬ್ಬರಿ ಹಾರ ಸೇರಿದಂತೆ ವಿವಿಧ ಮಾದರಿಯ ಹೂ,ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಚನ್ನಬಸವೇಶ್ವರ ಸ್ವಾಮಿ ತೋರಿಸಿದರು. ಇದೇ ವೇಳೆ ಗ್ರಾಮಸ್ಥರು ಜಯ ಘೋಷಣೆ ಕೂಗಿ ರಥವನ್ನು ಹಿಡಿದು ಸಂಭ್ರಮಿಸಿದರು.
ಇನ್ನು ಶ್ರೀಚನ್ನಬಸವೇಶ್ವರ ಸ್ವಾಮಿಯ ರಥ ಮೇಲೆ ತಮ್ಮ ಇಷ್ಟಾರ್ಥಗಳು ಈಡೇರಿಸುವಂತೆ ಬಾಳೆಹಣ್ಣುಗಳನ್ನು ಎಸೆಯುವುದು ವಾಡಿಕೆ. ಮಹಿಳೆಯೊಬ್ಬರು ಬಾಳೆಹಣ್ಣಿನ ಮೇಲೆ ʼಭಾರತ ಪಾಕಿಸ್ತಾನದ ಮೇಲೆ ಯುದ್ಧಸಾರಲಿʼ ಅನ್ನೋ ಬರಹವನ್ನು ಬರೆದು ರಥಕ್ಕೆ ಎಸೆದದ್ದು ವಿಶೇಷವಾಗಿತ್ತು. ಇನ್ನು ರಥೋತ್ಸವದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾಗರೋಪಾದಿಯಾಗಿ ಜನರು ಹರಿಬಂದಿದ್ದರು. ಇದೇ ವೇಳೆ ಜಾತ್ರೆಗೆ ಬಂದಿದ್ದ ಭಕ್ತರಿಗೆ ಪಾನಕ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.