ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ 27 ವರ್ಷದ ಯುವಕ ಮಂಜುನಾಥ್, ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಜುನಾಥ್ ತನ್ನ ಸೋದರ ಮಾವನ ಅಪ್ರಾಪ್ತ ವಯಸ್ಸಿನ ಮಗಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇನ್‌ಫ್ಯಾಕ್ಟ್ ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಮದುವೆಗೆ ಸೋದರ ಮಾವನ ಕುಟುಂಬದಿಂದ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತ ಯುವಕ ಮಂಜುನಾಥ್ ನಿನ್ನೆ ತನ್ನ ಪ್ರೇಯಸಿಯ ಹುಟ್ಟುಹಬ್ಬ ಇದ್ದ ಕಾರಣ ಸೋದರ ಮಾವನ ಮನೆಗೆ ಹೋಗಿದ್ದು, ಅಲ್ಲಿ ಈ ಪ್ರೀತಿಯ ವಿಷಯದ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ಮದುವೆಗೆ ಹುಡುಗಿಯ ಮನೆಯವರು ಒಪ್ಪದ ಕಾರಣ ಮನನೊಂದು, ಅಜ್ಜವಾರ ಗ್ರಾಮಕ್ಕೆ ವಾಪಸ್ ಆಗಮಿಸಿದ ಮಂಜುನಾಥ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಯುವಕನ ಸಾವಿನ ಬಗ್ಗೆ ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ನಿಖರ ಕಾರಣ ಮತ್ತು ಸಂದರ್ಭಗಳನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.