ಚಿಕ್ಕಬಳ್ಳಾಪುರ:
ಸರ್ಕಾರ ಏನೇ ಹೊಸ ಯೋಜನೆ ತಂದರೂ, ಅದರ ದುಡ್ಡು ಫಲಾನುಭವಿಗಳಿಗೆ ಸರಿಯಾಗಿ ಹೋಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಕೆಲ ರಾಜಕಾರಣಿಗಳು, ಅಧಿಕಾರಿಗಳು ಮಾತ್ರ ಭರ್ಜರಿಯಾಗಿಯೇ ನುಂಗಿ ನೀರು ಕುಡಿತಾರೆ. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ ನಡೆದ ಕೋಟ್ಯಾಂತರ ರೂಪಾಯಿಗಳ ಹಗರವೇ ಇದಕ್ಕೆ ತಾಜಾ ಉದಾಹರಣೆ.
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಡಿಸಿಸಿ ಬ್ಯಾಂಕ್ ಮತ್ತು ಅದರಡಿ ಬರುವ ಸಂಘ ಸಂಸ್ಥೆಗಳಲ್ಲಿ ಬೇನಾಮಿ ಸ್ತ್ರೀ ಶಕ್ತಿ ಸಂಘಗಳನ್ನು ಸೃಷ್ಟಿಸಿಕೊಂಡು ೩೫೦-೪೦೦ ಕೋಟಿ ರೂಪಾಯಿಯನ್ನು ಅಕ್ರಮವಾಗಿ ಲೂಟಿ ಮಾಡಿದ್ದಾರಂತೆ. ಚಿಂತಾಮಣಿ ತಾಲ್ಲೂಕೊಂದರಲ್ಲೇ 146 ಕೋಟಿ ರೂಪಾಯಿ ಹಗರಣ ನಡೆದಿದ್ಯಂತೆ. ಇದರಲ್ಲಿ ಆಡಳಿತ ಮಂಡಳಿಯೂ ಭಾಗಿಯಾಗಿರೋದು ಸ್ಪಷ್ಟವಾಗಿದೆ. ಈ ಸಂಬಂಧ ಹಲವು ಕಡೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು ರಾಜಕಾರಣಿಗಳು ಮತ್ತು ಆಡಳಿತ ಮಂಡಳಿ ಕೋರ್ಟ್ ಮೊರೆ ಹೋಗಿ ತಡೆ ತಂದಿದ್ದಾರೆ.
ಇನ್ನು ಇದರಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಅಂಡ್ ಪಟಾಲಂ ಭಾಗಿಯಾಗಿರೋದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇದರಲ್ಲಿ ಪ್ರಭಾವಿ ರಾಜಕಾರಣಿಗಳ ಪಾಲುದಾರಿಕೆ ಇರೋದರಿಂದ ಸರ್ಕಾರದ ಮೇಲೆ ಒತ್ತಡ ಹಾಕಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹ ಮಾಡಿ ಬಚಾವ್ ಆಗಲು ಪ್ರಯತ್ನ ಮಾಡ್ತಿದ್ದಾರೆ. ಆದರೆ ಖಡಕ್ ವಾರ್ನಿಂಗ್ ಮಾಡಿದ ಸಚಿವ ಸುಧಾಕರ್ ತಪ್ಪಿತಸ್ಥರ ಶಿಕ್ಷೆಗೆ ಮುಂದಾಗಿದ್ದಾರೆ.
ಇನ್ನೂ ಈಗಾಗಲೇ ಹಲವರ ವಿರುದ್ಧ ಅಕ್ರಮಗಳ ವಿರುದ್ಧ ತನಿಖೆಗೆ ದೂರು ದಾಖಲಾಗಿದ್ದು ಅದರ ವಿರುದ್ಧ ತಡೆ ಕೋರಿ ಆರೋಪಿತರು ಕೋರ್ಟ್ ಮೊರೆ ಹೋಗಿದ್ದಾರೆ. ಇದರಲ್ಲಿ ಕಾಂಗ್ರೆಸ್ ನ ಪ್ರಭಾವಿ ಶಾಸಕರು, ಮಂತ್ರಿಗಳು, ನಾಯಕರು ಭಾಗಿಯಾಗಿರೋದರಿಂದ ಅಕ್ರಮದ ತನಿಖೆ ಮಂದಗತಿಯಲ್ಲಿ ಸಾಗ್ತಿದೆ ಅಂತ ಕೈ ನಾಯಕರೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.
ಒಟ್ಟಿನಲ್ಲಿ ಮಹಿಳಾ ಫಲಾನುಭವಿಗಳ ಪಾಲಾಗಬೇಕಿದ್ದ ಹಣವನ್ನು ರಾಜಕಾರಣಿಗಳು, ಶಾಸಕರು, ಮಂತ್ರಿಗಳು, ಅಧಿಕಾರಿಗಳು ಸ್ತ್ರೀಶಕ್ತಿ ಸಂಘದ ಹೆಸರಿನಲ್ಲಿ ಬೇನಾಮಿಯಾಗಿ ತಿಂದು ತೇಗಿದ್ದಾರೆ. ಹೀಗಾಗಿ ಇವರು ಯಾವ ಸೀಮೆ ಜನಪರ ಕಾಳಜಿ ವಹಿಸಿ ಅಭಿವೃದ್ಧಿ ಮಾಡ್ತಾರೆ ಅಂತ ಜನ ಸಿಟ್ಟಿಗೆದ್ದಿದ್ದಾರೆ. ಅಕ್ರಮ ಎಸೆಗಿದವರು ಯಾವುದೇ ಪಕ್ಷದವರಾಗಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ಸಾರ್ವಜನಿಕರ ಹಣವನ್ನು ಜೋಪಾನ ಮಾಡಬೇಕಿದೆ.