ಚಿಕ್ಕಬಳ್ಳಾಪುರ : ಸಾಲ ಕಟ್ಟಿಲ್ಲ ಅಂತಾ ಬಾಣಂತಿಯನ್ನು ಹೊರ ಹಾಕಿ ದರ್ಪ..!

ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ
ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ಇಷ್ಟು ದಿನ ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯದ ಜನರು ಹೈರಾಣಿಗಿದ್ದರು. ಕೆಲವರು ಮನೆಗೆ ಬೀಗ ಹಾಕಿಕೊಂಡು ಊರನ್ನೇ ಬಿಟ್ಟು ಹೋದರೆ, ಇನ್ನು ಕೆಲವರು ಫೈನಾನ್ಸ್‌ಗಳ ಕಾಟಕ್ಕೆ ಸಾವಿಗೆ ಶರಣಾಗಿದ್ದರು. ಮೈಕ್ರೋ ಫೈನಾನ್ಸ್‌ಗಳ ಕಾಟದ ಜೊತೆಗೆ ಕೈ ಸಾಲಗಾರರ ಕಾಟ ಕೂಡ ಹೆಚ್ಚಾಗಿದ್ದು, ಸಾಲ ಪಡೆದುಕೊಂಡವರು ಜೀವಭಯದಲ್ಲಿದ್ದಾರೆ. ಸಾಲದ ಹಣ ಕಟ್ಟಿಲ್ಲ ಅಂತಾ ಬಾಣಂತಿಯನ್ನು ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಹಾಕಿ ಸಾಲಗಾರನು ದರ್ಪ ಮೆರೆದಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಎಂಬ ಗ್ರಾಮದಲ್ಲಿ ಸಾಲದ ಹಣ ಕಟ್ಟಿಲ್ಲ ಎಂದು ಮನೆಯಲ್ಲಿದ್ದ ಬಾಣಂತಿಯನ್ನು ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಹಾಕಿ ಸಾಲಗಾರ ಕ್ರೌರ್ಯ ಮೆರೆದಿದ್ದಾನೆ. ಕುರುಟಹಳ್ಳಿ ಗ್ರಾಮದ ಸುನೀಲ್, ವರಲಕ್ಷ್ಮಿ ಎಂಬ ದಂಪತಿ ಪಕ್ಕದ ಮನೆಯಲ್ಲಿದ್ದ ನವೀನ್‌ ಎಂಬಾತನಿಂದ ಸುಮಾರು 40 ಸಾವಿರ ಹಣವನ್ನು ಬಡ್ಡಿಗೆ ಸಾಲ ಪಡೆದುಕೊಂಡಿದ್ದರು. 40 ಸಾವಿರ ಸಾಲಕ್ಕೆ ಬಡ್ಡಿ ಸೇರಿಸಿ 72 ಸಾವಿರವನ್ನು ವಾಪಸ್‌ ಕೊಟ್ಟಿದ್ದರು ಕೂಡ ಮತ್ತೆ ಬಡ್ಡಿ ಕಟ್ಟುವಂತೆ ಸಾಲ ಕೊಟ್ಟ ನವೀನ್‌ ಎಂಬಾತ ದಂಪತಿ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಕೊಡಲಿಲ್ಲ ಅಂದರೆ ಮನೆಯಿಂದ ನಿಮ್ಮನ್ನು ಹೊರ ಹಾಕಿ, ಮನೆಯನ್ನು ಕೆಡವುತ್ತೇವೆ ಎಂದು ನವೀನ್‌ ಧಮ್ಕಿ ಹಾಕಿದ್ದಾನೆ ಎಂದು ಸುನೀಲ್‌ ಅಳಲು ತೋಡಿಕೊಂಡಿದ್ದಾರೆ.

ಪಕ್ಕದ ಮನೆಯಲ್ಲಿದ್ದ ನವೀನ್‌ ಕುಟುಂಬದಿಂದ ಸಾಲ ಪಡೆದುಕೊಂಡಿದ್ದು, ಮೂರು ಪಟ್ಟು ಹಣ ಕಟ್ಟಿದ್ದರೂ ಕೂಡ ಮತ್ತೆ ಮತ್ತೆ ಕಟ್ಟುವಂತೆ ಪೀಡಿಸಿ ಕಿರುಕುಳ ನೀಡುತ್ತಾರಂತೆ. ಅಲ್ಲದೇ ಬಾಣಂತಿ ಅನ್ನೋದನ್ನು ನೋಡದೇ ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಜಡಿದು ನವೀನ್, ಪ್ರದೀಪ್, ಪದ್ಮಮ್ಮ ಎಂಬುವವರು ದರ್ಪ ತೋರಿದ್ದಾರೆ. ಅಲ್ಲದೇ ಹಲ್ಲೆ ಮಾಡಲು ಮುಂದಾಗಿದ್ದು ದಂಪತಿ ಪೊಲೀಸರ ರಕ್ಷಣೆ ಕೋರಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅದೇನೆ ಆಗಲಿ, ಕಷ್ಟ ಎಂದು ಬಂದಾಗ ಸಾಲ ಕೊಟ್ಟು ಕಷ್ಟಕ್ಕೆ ನೆರವಾಗಿ, ಬಡ್ಡಿ ಹಣವನ್ನು ಕಟ್ಟಿದ್ದರೂ ಕೂಡ ಮತ್ತೆ ಮತ್ತೆ ಪೀಡಿಸಿ ಈ ರೀತಿಯ ದೌರ್ಜನ್ಯ ಮಾಡಿ ಕಷ್ಟಕ್ಕೆ ನೆರವಾದವರೇ ಈ ರೀತಿ ಕಷ್ಟ ಕೊಟ್ಟರೇ ಅವರು ಎಲ್ಲಿ ಹೋಗಬೇಕು. ಕೂಡಲೇ ಪೊಲೀಸ್‌ ಅಧಿಕಾರಿಗಳು ಕ್ರಮ ಕೈಗೊಂಡು ಬಾಣಂತಿಯನ್ನು ಮನೆಗೆ ಸೇರಿಸಬೇಕಿದೆ.

Author:

...
Editor

ManyaSoft Admin

Ads in Post
share
No Reviews