ಚನ್ನಪಟ್ಟಣ:
ರೈತರು ಬೆಳೆದಂತಹ ರೇಷ್ಮೆಗೂಡಿಗೆ ಹರಾಜಿನಲ್ಲಿ ರೀಲರ್ಸ್ ಗಳು ಕಡಿಮೆ ದರವನ್ನು ಕೂಗುತ್ತಿದ್ದನ್ನು ಖಂಡಿಸಿ ರೇಷ್ಮೆ ಬೆಳೆಗಾರರು ಇಂದು ಮಾರುಕಟ್ಟೆ ಮುಂಭಾಗದ ಬೆಂಗಳೂರು ಮೈಸೂರು ಹೆದ್ದಾರಿಗಿಳಿದು ಪ್ರತಿಭಟನೆಯನ್ನು ನಡೆಸಿದರು.
ಭಾನುವಾರ ಕೆ.ಜಿ.ಗೂಡಿಗೆ 600 ಧಾರಣೆಯಿದ್ದು, ಇಂದು ಏಕಾಏಕಿ ರೀಲರ್ಗಳು ಕಡಿಮೆ ಬೆಲೆಗೆ ಹರಾಜು ಕೂಗುತ್ತಿದ್ದನ್ನು ಖಂಡಿಸಿ ಇಂದು ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಮಾರುಕಟ್ಟೆ ಅಧಿಕಾರಿಗಳು ಹಾಗೂ ಪೊಲೀಸರು ರೀಲರ್ಸ್ ಜತೆ ಮಾತುಕತೆ ನಡೆಸುವುದಾಗಿ ತಿಳಿಸಿ ಪ್ರತಿಭಟನಾ ರೈತರನ್ನು ಸಮಾಧಾನಪಡಿಸಿ ಮಾರುಕಟ್ಟೆ ಒಳಕ್ಕೆ ಕರೆತಂದರು.
ಮಾರುಕಟ್ಟೆಗೆ ಹೆಚ್ಚಿನ ಗೂಡು ಬಂದಿಲ್ಲವೆಂದು ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿದ್ದ ರೀಲರ್ಸ್ಗಳು ಮಾರುಕಟ್ಟೆ ಒಳಕ್ಕೆ ಆಗಮಿಸಿ ಪೊಲೀಸರ ಜತೆ ಮಾತುಕತೆ ನಡೆಸಲಾರಂಭಿಸಿದರು. ಈ ವೇಳೆ ರೈತರು ಹಾಗೂ ರೀಲರ್ಸ್ಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ರೇಷ್ಮೆ ಬೆಳೆಗಾರರು ದರ ಕಡಿಮೆಯೆಂದು ಪ್ರತಿಭಟನೆ ಗಿಳಿಯುತ್ತಿದ್ದಂತೆ ಸ್ಥಳಕ್ಕೆ ರೈತ ಸಂಘಟನೆಗಳ ಮುಖಂಡರು ಹಾಜರಾಗಿ ಅಧಿಕಾರಿಗಳು ಹಾಗೂ ರೀಲರ್ಸ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.